ಕಾಡ್ಗಿಚ್ಚು ತಡೆಗೆ ಅಗತ್ಯ ರಕ್ಷಣೆ ನೀಡದ ರಾಜ್ಯ ಸರ್ಕಾರ ಕಾವಲುಗಾರರ ಸಾವಿಗೆ ನೇರ ಹೊಣೆ: JDS

Prasthutha|

- Advertisement -

ಬೆಂಗಳೂರು: ಕಾಡ್ಗಿಚ್ಚು ತಡೆಗೆ ಅಗತ್ಯ ರಕ್ಷಣೆಯ ಸೌಲಭ್ಯಗಳನ್ನು ನೀಡದ ರಾಜ್ಯ ಸರ್ಕಾರ ಕಾವಲುಗಾರರ ಸಾವಿಗೆ ನೇರ ಹೊಣೆ ಎಂದು JD(S) ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಸಕಲೇಶಪುರ ತಾಲೂಕಿನ ರಣಭಿಕ್ತಿ ರಕ್ಷಿತಾರಣ್ಯದಲ್ಲಿ ಬೆಂಕಿ ನಂದಿಸಲು ಹೋಗಿ ಗಾಯಗೊಂಡಿದ್ದ ಅರಣ್ಯ ಇಲಾಖೆಯ ಗಾರ್ಡ್ ಸುಂದರೇಶ್ ಅವರು ಮೃತಪಟ್ಟಿರುವ ಸುದ್ದಿ ನಿಜಕ್ಕೂ ಆಘಾತಕಾರಿ. ರಾಜ್ಯ ಸರ್ಕಾರ ಇದಕ್ಕೆ ನೇರ ಹೊಣೆ. ಅರಣ್ಯ ಕಾವಲುಗಾರರಿಗೆ ಮೂರ್ನಾಲ್ಕು ತಿಂಗಳಿಂದ ಸಂಬಳ ಸಿಗದಿರುವ ಸಂಗತಿಯ ಬೆನ್ನಲ್ಲೆ ಈ ಸಾವು ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಈ ಘಟನೆಯಲ್ಲಿ ಫಾರೆಸ್ಟರ್ ಮಂಜುನಾಥ್ ಅವರು ತೀವ್ರವಾಗಿ ಗಾಯಗೊಂಡು,ಗಂಭೀರ ಸ್ಥಿತಿಯಲ್ಲಿದ್ದಾರೆ. ಇದೇ ರೀತಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 5 ವರ್ಷಗಳ ಹಿಂದೆಯೂ ದುರ್ಘಟನೆ ಸಂಭವಿಸಿತ್ತು. ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚು ಸಮಸ್ಯೆ ಬಿಗಡಾಯಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತರೀತಿ ಸಜ್ಜಾಗಬೇಕಲ್ಲವೆ? ಎಂದು JDS ಕೇಳಿದೆ.

ಅರಣ್ಯ ಸಂರಕ್ಷಣೆಗಾಗಿ ಹಗಲಿರುಳು ದುಡಿಯುವ ಕಾವಲುಗಾರರಿಗೆ ಹಲವು ತಿಂಗಳಿಂದ ಸಂಬಳವೇ ಪಾವತಿಯಾಗಿಲ್ಲ. ಸಂಬಳ ಸಿಗದೆ ಕೆಲಸಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಕಾವಲುಗಾರರು ವೃತ್ತಿಗೆ ಹಾಜರಾಗದಿರಲು ನಿರ್ಧರಿಸಿದ್ದರು. ಇದೇ ಸಂದರ್ಭದಲ್ಲಿ ಇಂತಹ ದುರ್ಘಟನೆ ನಡೆದಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರೆ, ಕಳ್ಳಬೇಟೆ, ಅಗ್ನಿದುರಂತ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ನೌಕರರಿಗೆ ನಿಯಮಿತ ಸಂಬಳ ಕೊಡಲು ನಿಮಗೆ ಸಾಧ್ಯವಾಗಿಲ್ಲ. ಜತೆಗೆ, ಕಾಡ್ಗಿಚ್ಚು ತಡೆಗೆ ಅಗತ್ಯ ರಕ್ಷಣೆಯ ಸೌಲಭ್ಯಗಳನ್ನು ಕೊಡದೆ ಕಾವಲುಗಾರರ ಸಾವಿಗೆ ಕಾರಣವಾಗುವುದು ಯಾವ ಸೀಮೆಯ ಆಡಳಿತ ಎಂದು ಜನತಾದಳ ಪ್ರಶ್ನಿಸಿದೆ.

Join Whatsapp