ಮೈಸೂರು: ಶಾಲಾ-ಕಾಲೇಜುಗಳಲ್ಲಿ ಮುಖ ತೋರಿಸಬೇಕು. ಆದರೆ ತಲೆಕೂದಲನ್ನು ತೋರಿಸಬೇಕು ಎಂದೇನಿಲ್ಲ. ಹಿಜಾಬ್ ತಲೆಕೂದಲನ್ನು ಮರೆಸುತ್ತದೆಯೇ ಹೊರತು ಮುಖವನ್ನಲ್ಲ. ನಮ್ಮ ತಲೆಕೂದಲನ್ನು ನಾವು ಮುಚ್ಚಿದರೆ ಇನ್ನೊಬ್ಬರಿಗೆ ಏನಯ್ಯಾ ಕಷ್ಟ? ಎಂದು ಮಾಜಿ ಸಚಿವೆ, ಹೋರಾಟಗಾರ್ತಿ ಬಿ .ಟಿ ಲಲಿತಾ ನಾಯಕ್ ಪ್ರಶ್ನಿಸಿದ್ದಾರೆ.
ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಮೈಸೂರು ನಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ “ಮಹಿಳಾ ಹಕ್ಕುಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಜಾಬ್ ವಿಚಾರ ಸರ್ಕಾರಿ ಶಾಲೆಯಲ್ಲಿ ಮೊದಲು ಶುರುವಾಗಿದೆ. ತಲೆ ಮುಚ್ಚಿದರೆ ಸರ್ಕಾರಕ್ಕೆ ಏನು ತೊಂದರೆ ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರ ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ವಿವಾದಗಳನ್ನು ಸೃಷ್ಟಿಸುತ್ತಿದೆ. ಮುಸ್ಲಿಂ ಹೆಣ್ಮಕ್ಕಳು ಓದಬಾರದು ಎಂಬ ಷಡ್ಯಂತ್ರ ಇದರ ಹಿಂದಿರುವ ಸಾಧ್ಯತೆಯಿದೆ ಎಂದು ಆರೋಪಿಸಿದರು.
ಹಿಜಾಬ್ ಎಂದರೆ ಸೆರಗು. ಹಿಂದೂ-ಮುಸ್ಲಿಂ ಒಳಗೊಂಡಂತೆ ಹಲವು ಧರ್ಮಗಳಲ್ಲಿ ಹೆಣ್ಣುಮಕ್ಕಳು ತಲೆ ಮುಚ್ಚಿಕೊಳ್ಳುವ ಸಂಪ್ರದಾಯ ಇದೆ. ಅರಬ್ ನಾಡಿನಲ್ಲಿ ಗಂಡಸರು ತಲೆ ಮುಚ್ಚಿಕೊಳ್ಳುತ್ತಾರೆ. ಎಲ್ಲಾ ಜಾತಿ ವರ್ಗಗಳಲ್ಲೂ ಗೌರವ ಅಥವಾ ಇನ್ನೊಂದು ಕಾರಣಕ್ಕಾಗಿ ತಲೆ ಮುಖ ಮರೆಸುವರು, ಅದರಲ್ಲಿ ತಪ್ಪೇನಿಲ್ಲ ಎಂದರು.
ಬಿಜೆಪಿ ಸರ್ಕಾರ ಒಂದು ಧರ್ಮವನ್ನು ಗುರಿಯಾಗಿಸಿ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಅದನ್ನು ವಿರೋಧಿಸಿದರೆ ಪಾಕಿಸ್ತಾನಕ್ಕೆ ಹೋಗಿ ಅನ್ನುತ್ತಾರೆ. ಪುರಾಣದ ಕಾಲದಲ್ಲಿ ಮಹಿಳೆಯರ ಮೇಲೆ ಕಿರುಕುಳ ಹಿಂಸೆ ನಡೆಯುತ್ತಲೇ ಇತ್ತು. ಅದು ಇಂದು ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಆ ಬಗ್ಗೆ ನಾವು ಜಾಗೃತರಾಗಬೇಕು ಎಂದರು.
ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದ ವಿಮ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್ , ಕೋವಿಡ್ ಕಾರಣದಿಂದ ಹಲವಾರು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿರುವ ಭಯಾನಕ ಅಂಕಿ ಅಂಶ ಹೊರಬಿದ್ದಿದೆ. ಮಕ್ಕಳನ್ನು ಮರಳಿ ಶಾಲೆಗೆ ಕರೆತರಬೇಕಾದವರು, ಶಿಕ್ಷಣಕ್ಕಾಗಿ ಹಂಬಲಿಸಿ ಬರುವ ಹೆಣ್ಣು ಮಕ್ಕಳನ್ನು ಶಿರಾವಸ್ತ್ರ ಧರಿಸಿದ ಕಾರಣಕ್ಕಾಗಿ ಪರೀಕ್ಷಾ ಕೊಠಡಿಯಿಂದ ಹೊರದಬ್ಬುವುದು ‘ಭೇಟಿ ಬಚಾವೋ, ಭೇಟಿ ಪಡವೋ’ದ ಯಾವ ಭಾಗ ಎಂದು ಪ್ರಶ್ನಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ – “ಸ್ವಾತಂತ್ರ್ಯದ ‘ಅಮೃತ ಮಹೋತ್ಸವ’ವನ್ನು ಆಚರಿಸುತ್ತಿರುವ ಈ ಸಂಧರ್ಭದಲ್ಲೂ ನಮ್ಮ ತಾಯಿ- ಸಹೋದರಿಯರು ತಮ್ಮ ಹಕ್ಕಿಗಾಗಿ ಬೀದಿಯಲ್ಲಿ ನಿಂತು ಹೋರಾಟ ಮಾಡಬೇಕಾದ ಸನ್ನಿವೇಶ ನಾಚಿಕೆಗೇಡು” ಎಂದು ಸರಕಾರದ ವಿರುದ್ಧ ಖೇದ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾಧ್ಯಕ್ಷೆ ಆಯಿಶಾ ಝಬಿ ಅಧ್ಯಕ್ಷತೆಯನ್ನು ವಹಿಸಿದ್ದರು. ಭೀಮ್ ಆರ್ಮಿ ರಾಜ್ಯಾಧ್ಯಕ್ಷೆ ತಬಸ್ಸುಂ ಬೆಂಗಳೂರು,ಎನ್. ಡಬ್ಲ್ಯೂ ಎಫ್ ರಾಜ್ಯ ಸಮಿತಿ ಸದಸ್ಯೆ ಝಾಕಿಯ ಮಡಿಕೇರಿ, ನಿವೃತ್ತ ಪ್ರಾಂಶುಪಾಲರಾದ ಡಾಕ್ಟರ್ ಬಿಕೆ ಪ್ರಮಿಳಾ ದೇವಿ, ಹೈಕೋರ್ಟ್ ವಕೀಲ ತಾಹಿರ್, ಮೌಲಾನಾ ನೂರುದ್ದಿನ್ ಫಾರೂಕಿ ಮಾತಾಡಿದರು.
ಕಾರ್ಯಕ್ರಮದ ಮುಂಚಿತವಾಗಿ ಮೈಸೂರು ಮಿಷನ್ ಆಸ್ಪತ್ರೆ ರಸ್ತೆಯಿಂದ ಕಾರ್ಯಕ್ರಮದ ನಡೆದ ಮೈದಾನ ತನಕ ಮಹಿಳೆಯರು ಆಕರ್ಷಕ ದ್ವಿಚಕ್ರ ವಾಹನ ರ‍್ಯಾಲಿ ಮೂಲಕ ಅತಿಥಿಗಳನ್ನು ಕರೆತಂದರು.