ಸ್ಟಾಂಡ್ ವಿಥ್ ಪ್ಯಾಲೆಸ್ತೀನ್… ಯಾಕಾಗಿ.?

Prasthutha|

- Advertisement -

ಕಳೆದ ಏಳೂವರೆ ದಶಕಗಳಿಂದ ತನ್ನ ನೆಲದ ಜನತೆ ಅನುಭವಿಸುತ್ತಿರುವ ಅಭದ್ರತೆ, ಅಸುರಕ್ಷತೆ, ಆಕ್ರೋಶ , ಹತಾಶೆಗಳಿಗೆ, ಅನ್ಯಾಯಗಳಿಗೆ ವಿರುದ್ಧವಾಗಿ ಹಮಾಸ್ ತೋರಿದ ಒಂದೇ ಒಂದು ಪ್ರತಿರೋಧಕ್ಕೆ ಪ್ರತಿಯಾಗಿ ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಒಂದೇ ವೇದಿಕೆಯಡಿ ಬಂದು ಕ್ಷಣಾರ್ಧದಲ್ಲಿ ಇಸ್ರೇಲ್‌ಗೆ ಬೆಂಬಲ ಘೋಷಿಸುವ ಮೂಲಕ ಇಸ್ರೇಲ್ ನ ಜನಾಂಗೀಯ ದ್ವೇಷದಲ್ಲಿ ಕೈ ಜೋಡಿಸಿದೆ. ರಾಷ್ಟ್ರೀಯ , ಅಂತಾರಾಷ್ಟ್ರೀಯ ಮಾಧ್ಯಮಗಳು ಬಿಸಿ ಬಿಸಿ ಚರ್ಚೆಗಳಿಂದ, ಸುಳ್ಳು ಸುದ್ದಿಗಳ ಪ್ರಚಾರದಿಂದ ಹಮಾಸ್ ಅನ್ನು ಭಯೋತ್ಪಾದಕನಂತೆ ಚಿತ್ರೀಕರಿಸಲು ಪೈಪೋಟಿ ನಡೆಸಿ ಯಶಸ್ವಿಯಾಗಿದೆ.
ಪ್ಯಾಲೆಸ್ತೀನ್ ಮಣ್ಣಿನಲ್ಲಿ ಅಕ್ರಮವಾಗಿ ನೆಲೆಯೂರಿರುವ ಇಸ್ರೇಲ್ ಎಂಬ ವಸಾಹತುಶಾಹಿ ರಾಷ್ಟ್ರ 75 ವರ್ಷಗಳಿಂದ ಗಾಝಾ ಪಟ್ಟಿಯಲ್ಲಿ ನಡೆಸಿಕೊಂಡು ಬಂದಿರುವ ಭೀಕರ ನರಮೇಧ ಮತ್ತು ಅಲ್ಲಿನ ದ್ವಿರಾಷ್ಟ್ರ ಸಂಘರ್ಷಗಳಲ್ಲಿ ಮಡಿದವರ ಅಂಕಿ ಅಂಶಗಳನ್ನು ವಿವೇಕದಿಂದ ಗಮನಿಸುವ ಯಾವುದೇ ಒಬ್ಬ ಸಾಮಾನ್ಯ ನಾಗರಿಕನಿಗೂ ಹಮಾಸ್ ತೋರಿದ ಪ್ರತಿರೋಧವನ್ನು ಭಯೋತ್ಪಾದಕ ಕ್ರತ್ಯವೆಂದು ಬಣ್ಣಿಸಲು ಸಾಧ್ಯವಿಲ್ಲ. ನಿರಂತರ ಶೋಷಣೆಯಿಂದ ನ್ಯಾಯವು ನಿರಾಕರಿಸಲ್ಪಟ್ಟಾಗ ಸಹಜವಾಗಿ ದಮನಿತ ವರ್ಗವು ತೋರುವ ಪ್ರತಿರೋಧವಾಗಿತ್ತು ಹಮಾಸ್ ದಾಳಿ .
75% ನಿರಾಶ್ರಿತರು ಇರುವ ಗಾಝಾ ಜನತೆ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಕಳೆದುಕೊಂಡು ಏಳು ದಶಕಗಳು ಕಳೆದಿವೆ. ಓಸ್ಲೋ ಶಾಂತಿ ಒಪ್ಪಂದದ ನಂತರವೂ ಲಕ್ಷಾಂತರ ಯಹೂದಿಗಳನ್ನು ಪೂರ್ವ ಜೆರುಸಲೇಮ್ ಹಾಗೂ ಪಶ್ಚಿಮ ದಂಡೆಯಲ್ಲಿ ಅಕ್ರಮವಾಗಿ ನೆಲೆಯೂರಿಸಲಾಗಿದೆ. ಜಿಯೋನಿಸ್ಟರ ಸತತ ಹಿಂಸಾಚಾರ, ಶೋಷಣೆಗಳಿಂದ ಪ್ಯಾಲೆಸ್ತೀನ್ ಜನತೆ ತತ್ತರಿಸಿ ಹೋಗಿದ್ದಾರೆ. ಮನೆಗಳಿಗೆ ನುಗ್ಗಿ ಲೂಟಿ ಮಾಡಿ, ಬೆಂಕಿ ಹಚ್ಚಿ ವಿಕೃತಿ ಮೆರೆಯುವಾಗ ಇಸ್ರೇಲ್ ಪೋಲೀಸರು ಈ ದಾಳಿಕೋರರಿಗೆ ಬೆಂಗಾವಲಾಗಿ ನಿಲ್ಲುತ್ತಾರೆ. ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದಂತೆ ಗಾಝಾ ಪಟ್ಟಿಯ ಸುತ್ತಲೂ ಬೃಹತ್ ಗೋಡೆಯನ್ನು ಕಟ್ಟಿ ನಿಲ್ಲಿಸಲಾಗಿದೆ. ಆಹಾರ, ಇಂಧನ , ಔಷಧಿ ಮುಂತಾದ ಮೂಲಭೂತ ಅಗತ್ಯಗಳಿಗೂ ಇಸ್ರೇಲಿಗರನ್ನೇ ಅವಲಂಭಿಸುವಂತೆ ದಿಗ್ಬಂಧನಗಳನ್ನು ವಿಧಿಸಲಾಗಿದೆ. ಆಸ್ಪತ್ರೆ, ವಿದ್ಯಾಲಯಗಳು ಹಾಗೂ ಮನೆಗಳನ್ನೆ ಗುರಿಯಾಗಿಸಿ ನಿರಂತರ ದಾಳಿಗಳನ್ನು ಸಂಘಟಿಸಲಾಗಿದೆ. ಪ್ಯಾಲೆಸ್ತೀನ್ ಪ್ರಾಂತ್ಯಗಳಲ್ಲಿ ಅಲ್ಲಿನ ಮೂಲ ನಿವಾಸಿಗಳನ್ನು ಅಕ್ರಮವಾಗಿ ಹೊರಹಾಕಿ, ಅವರ ಮನೆಗಳನ್ನು ಅಕ್ರಮವಾಗಿ ನೆಲೆಯೂರಲು ಯತ್ನಿಸುತ್ತಿರುವ ಇಸ್ರೇಲಿಗರಿಗೆ ಕೊಡಲಾಗುತ್ತಿದೆ.
ಇಸ್ರೇಲಿಗರ ಜೈಲುಗಳಲ್ಲಿ ವಿನಾ ಕಾರಣ ಬಂಧಿಸಲ್ಪಟ್ಟ ಮಹಿಳೆಯರು ಮಕ್ಕಳು ಸೇರಿದಂತೆ ಹಲವಾರು ಪ್ಯಾಲೇಸ್ತೀನಿಯರನ್ನು ಅತಿ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತದೆ. ಹುಟ್ಟುವ ಪ್ರತಿಯೊಂದು ಮಗುವೂ ಬಾಂಬ್, ಗ್ರೆನೇಡ್‌‌‌ಗಳ ಸದ್ದಿನೊಂದಿಗೆ ಬೆಳೆದು ಬರುತ್ತಿದೆ. ಪ್ರತಿ ರಾತ್ರಿ ಮತ್ತು ಹಗಲು ವರ್ಣಭೇದ ನೀತಿಯಡಿ ಜನಾಂಗೀಯ ದಮನಗಳಿಗೆ ಗುರಿಪಡಿಸಲಾಗುತ್ತಿರುವ ಹೀನಾಯ ಕೃತ್ಯಗಳು ಇಂದು ನಿನ್ನೆಯದಲ್ಲ, 1948ರಿಂದಲೂ
ಪ್ಯಾಲೆಸ್ತೀನಿಯರ ಪ್ರತಿಯೊಂದು ಹಗಲು ಮತ್ತು ರಾತ್ರಿಗಳು ಇಷ್ಟು ಭೀಭತ್ಸವಾಗಿರುವಾಗ ತಮ್ಮ ಪೂರ್ವಾಗ್ರಹ ಪೀಡಿತ ಯೋಚನೆಗಳಿಂದ ಹೊರಬರಲಾಗದ, ಅಂತಃಕರಣವಿಲ್ಲದ ಮಾಧ್ಯಮಗಳು ಹಾಗೂ ವಿವೇಚನಾರಹಿತ ಜನರಿಗಷ್ಟೆ ರಕ್ತಪಿಪಾಸು ಇಸ್ರೇಲ್ ಪರ ನಿಲ್ಲಲು ಸಾಧ್ಯವಾಗಲಿದೆ.
ಪ್ಯಾಲೆಸ್ತೀನ್‌ನಲ್ಲಿ ಹರಿಯುತ್ತಿರುವ ನೆತ್ತರು ಮುಸ್ಲಿಮ್ ಸಮುದಾಯದ್ದು ಎಂಬ ಒಂದೇ ಒಂದು ಕಾರಣಕ್ಕೆ
ಸ್ಟಾಂಡ್ ವಿಥ್ ಇಸ್ರೇಲ್ ಎಂಬ ಬೋರ್ಡ್ ಹಾಕಿಕೊಳ್ಳುವ ಅಂಧ ಭಕ್ತರು ತಮ್ಮ ಸಂಕುಚಿತ ಮನೋಭಾವದಿಂದ ಹೊರ ಬಂದು ಇತಿಹಾಸವನ್ನು ಮನನ ಮಾಡಿಕೊಳ್ಳುವ ಅಗತ್ಯವಿದೆ.

ಇಸ್ರೇಲ್ ನ ಮಾನವ ಹಕ್ಕುಗಳ ಆಯೋಗವು 23 ಲಕ್ಷದಷ್ಟಿರುವ ಗಾಝಾ ಜನತೆಯ ಮೇಲೆ ಇಸ್ರೇಲ್ ನಡೆಸುತ್ತಿರುವ ಅಮಾನವೀಯ ಕೃತ್ಯವನ್ನು ಖಂಡಿಸಿ ಈ ದಾಳಿಗಳು ಯುಧ್ಧಾಪರಾಧಗಳಿಗೆ ಸಮಾನವಾಗಿದೆ ಎಂದು ಹೇಳಿದೆ. ಅಲ್ಲಿನ ವಿರೋಧ ಪಕ್ಷಗಳು ನೆತನ್ಯಾಹು ಸರ್ಕಾರದ ನೀತಿಗಳೇ ಸಂಘರ್ಷಗಳಿಗೆ ಕಾರಣ ಎಂದು ಬಹಿರಂಗವಾಗಿ ಹೇಳಿಕೆ ನೀಡಿದೆ. ಅಮೆರಿಕಾದಲ್ಲಿ ಸಕ್ರಿಯವಾಗಿರುವ ಯಹೂದಿ ಸಂಘಟನೆ ‘ಇಫ್ ನಾಟ್ ನೌ’ ಇಸ್ರೇಲ್‌‌ನ ಧೋರಣೆಗಳನ್ನು ಖಂಡಿಸುತ್ತಾ “ಹಮಾಸ್ ನಡೆಸಿರುವ ದಾಳಿಯನ್ನು ನಾವು ಅಪ್ರಚೋದಿತ ಎಂದು ಪರಿಗಣಿಸುವುದಿಲ್ಲ. ಇಸ್ರೇಲ್‌ನ ವರ್ಣಭೇದ‌ ವ್ಯವಸ್ಥೆಯಡಿಯಲ್ಲಿ ಪ್ರತಿಯೊಂದು ದಿನವೂ ಪ್ರಚೋದಿತವಾಗಿದೆ” ಎಂದು ಹೇಳಿದೆ. ಹಗಾಯ್ ಮಥಾರೆ ಎಂಬ ಇಸ್ರೇಲ್ ಪತ್ರಕರ್ತ “ಪ್ಯಾಲೆಸ್ತೀನ್ ಪ್ರದೇಶಗಳನ್ನು ಕಬಳಿಸಿ ಯಹೂದಿ ಉಗ್ರಗಾಮಿ ದೇಶವನ್ನಾಗಿ ಮಾರ್ಪಡಿಸಬೇಕೆನ್ನುವ ಇಸ್ರೇಲಿನ ಸೇನೆಯಲ್ಲಿ ತಾನು ಸೇವೆ ಸಲ್ಲಿಸುವುದಿಲ್ಲ” ಎಂದು ತಿರಸ್ಕರಿಸಿದ್ದಾರೆ. “ಶಾಂತಿ ಒಪ್ಪಂದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ಯಾಸರ್ ಅರಾಫತ್ ಹಾಗೂ ಶಾಂತಿ ಪ್ರಕ್ರಿಯೆಗಳಿಗಾಗಿ ಓಸ್ಲೋ ಒಪ್ಪಂಕ್ಕೆ ಸಹಿ ಹಾಕಿದ ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್ ಅನ್ನು ಇಸ್ರೇಲ್ ಪ್ರಭುತ್ವವು ನಡೆಸಿಕೊಂಡು ಬಂದ ರೀತಿಯೇ ಹಮಾಸ್ ಹುಟ್ಟಲು ಕಾರಣವಾಯಿತು” ಎನ್ನುತ್ತಾರೆ ಖ್ಯಾತ ಇಸ್ರೇಲ್ ಇತಿಹಾಸಕಾರ ಇಲಾನ್ ಪಪ್ಪೆ.
ನ್ಯಾಯೋಚಿತ ವಾದಗಳಿಂದ ಸತ್ಯವನ್ನು, ವಾಸ್ತವಗಳನ್ನು ಜಗತ್ತಿನ ಮುಂದೆ ತೆರೆದಿಡಲು ಸಾಹಸ ತೋರುವ ಇಂತಹ ಸಾಕ್ಷಿ ಪ್ರಜ್ಞೆಗಳು, ಅಲ್ಪವೂ ವಿವೇಚನೆ ಇಲ್ಲದೆ ಇಸ್ರೇಲ್ ಪರ ನಿಲ್ಲುವ ಎಲ್ಲಾ ದೇಶಗಳಿಗೆ ಪಾಠವಾಗಿದ್ದಾರೆ.
ವಿಶ್ವದಲ್ಲಿ ಸ್ವಾತಂತ್ರ್ಯ , ನ್ಯಾಯ, ಮತ್ತು ಶಾಂತಿಯ ಹಕ್ಕುಗಳನ್ನು ಎತ್ತಿ ಹಿಡಿಯಬೇಕಾದ ಭದ್ರತಾ ಮಂಡಳಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಆಹಾರದ ಹಕ್ಕು, ಚಿತ್ರ ಹಿಂಸೆ ಮುಂತಾದ ವಿಷಯಾಧಾರಿತ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕಾದ United Nations humans right council ಮೌನಕ್ಕೆ ಶರಣಾಗಿದೆ.
ಸಂಘರ್ಷದ ಪ್ರದೇಶಗಳಲ್ಲಿ ತನಿಖೆ ನಡೆಸಲು ಮತ್ತು ಮಧ್ಯಸ್ಥಿಕೆ ವಹಿಸಲು ಯುದ್ಧ ಘೋಷಿಸುವ ರಾಷ್ಟ್ರಗಳಿಗೆ ಆರ್ಥಿಕ ದಿಗ್ಬಂಧನ ಹಾಗೂ ಶಸ್ತ್ರಾಸ್ತ್ರ ನಿರ್ಬಂಧ ಹೇರಲು ಅವಕಾಶವಿರುವ ವಿಶ್ವ ಭದ್ರತಾ ಮಂಡಳಿ ತನ್ನ ಅಧಿಕಾರವನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಅಶಕ್ತವಾಗಿದೆ.
ಭಾರತಕ್ಕೆ ಮಾನವ ಹಕ್ಕುಗಳ ಬೋಧನೆ ಮಾಡುವ ಅಮೇರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಇಸ್ರೇಲ್ ಪರ ನಿಂತು ನೈತಿಕತೆಯನ್ನು ಕಳೆದುಕೊಂಡಿದೆ. ಅರಬ್ ರಾಷ್ಟ್ರಗಳು ಡಾಲರ್‌ಗಳನ್ನು ಸುರಿದು ಪ್ಯಾಲೆಸ್ತೀನ್‌ಗೆ ನೆರವಾಗುತ್ತಿದೆಯಾದರೂ , ಶಾಶ್ವತ ಕದನ ವಿರಾಮಕ್ಕೆ, ನ್ಯಾಯ ಸ್ಥಾಪನೆಗೆ ಇಸ್ರೇಲ್ ಮೇಲೆ ಒತ್ತಡ ಹೇರುವಲ್ಲಿ
ವಿಫಲವಾಗಿದೆ.
ಇಸ್ರೇಲ್ ಗೆ ಬೆಂಬಲ ಘೋಷಿಸುವ, ಅದರ ಅತಿಕ್ರಮಣಗಳನ್ನು ಮುಚ್ಚಿ ಹಾಕುವ ಒಂದಷ್ಟು ದೇಶಗಳು ಮತ್ತು ಮೌನವಾಗಿರುವ ಅಂತಾರಾಷ್ಟ್ರೀಯ ನಾಯಕರುಗಳ ಕೈಗಳ ಮೇಲೆ ದಾಳಿಗಳಲ್ಲಿ ಹತರಾದವರ ರಕ್ತದ ಕಲೆಗಳು ಅಂಟಿಕೊಳ್ಳಲಿದೆ. ತನ್ನದೇ ನೆಲದಲ್ಲಿ ಇಸ್ರೇಲಿಗರ ಗುಲಾಮಗಿರಿಯಿಂದ ಬೇಸತ್ತು, ತನ್ನ ಅಸ್ತಿತ್ವ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಪ್ಯಾಲೆಸ್ತೀನಿಯರ ಅಸಹಾಯಕತೆಯ ಮುಂದೆ ವಿಶ್ವವು ನಿರ್ಜಿವವಾಗಿ ಕೈ ಕಟ್ಟಿ ಕುಳಿತಿರುವಾಗ ಚಲನೆ ಇರುವ , ಅಂತಃಕರಣವಿರುವ ಪ್ರತಿಯೊಂದು ಜೀವವೂ ಸ್ಟಾಂಡ್ ವಿಥ್ ಪ್ಯಾಲೆಸ್ತೀನ್ ಎಂದು ಘೋಷಿಸಲೇಬೇಕಿದೆ.

- Advertisement -
✍️ ಎಫ್.ನುಸೈಬಾ . . ಕಲ್ಲಡ್ಕ