ಚೆನ್ನೈ: ತಮಿಳ್ನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸೋಮವಾರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅನ್ನು ಹಿಂಪಡೆಯುವಂತೆ ಕೋರುವ ಮಸೂದೆಯನ್ನು ಮಂಡಿಸಿದರು.
ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವ ಭರವಸೆಯೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು.
ಈ ಮಸೂದೆಯನ್ನು ವಿಧಾನಸಭೆಯಲ್ಲಿ ಎರಡನೇ ಅವಧಿಗೆ ಮಂಡಿಸಲಾಗುತ್ತಿದೆ. ಈ ಹಿಂದೆ ಎಐಎಡಿಎಂಕೆ ಆಡಳಿತಾವಧಿಯಲ್ಲಿ ಇದೇ ವಿಧೇಯಕವನ್ನು ವಿಧಾನಸಭೆಯು ಅಂಗೀಕರಿಸಿದ ಹೊರತಾಗಿಯೂ ರಾಷ್ಟ್ರಪತಿಗಳ ಅಂಕಿತ ಪಡೆದಿರಲಿಲ್ಲ.
ಮಸೂದೆಯನ್ನು ಮಂಡಿಸಿ ಪ್ರತಿಕ್ರಿಯಿಸಿದ ಸ್ಟಾಲಿನ್, ಡಿಎಂಕೆ ಹಿಂದಿನಿಂದಲೂ ನೀಟ್ ಅನ್ನು ವಿರೋಧಿಸುತ್ತಿದೆ ಮತ್ತು ಅಧಿಕಾರಕ್ಕೇರಿದ ನಂತರ ಇದರ ವಿರುದ್ಧ ಕಾನೂನು ಹೋರಾಟ ಆರಂಭಿಸಿದೆ ಎಂದು ತಿಳಿಸಿದರು. ಮಾತ್ರವಲ್ಲದೆ ಈ ಮಸೂದೆಯನ್ನು ಬೆಂಬಲಿಸುವಂತೆ ಪ್ರತಿಪಕ್ಷವನ್ನು ಕೋರಿದರು.
12ನೇ ತರಗತಿಯ ಅಂಕಗಳ ಆಧಾರದಲ್ಲಿ ವೈದ್ಯಕೀಯ ಸೀಟುಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ತರಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಸ್ಟಾಲಿನ್ ತಿಳಿಸಿದರು. ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿದ ನಂತರ ಅಂಕಿತಕ್ಕಾಗಿ ರಾಷ್ಟ್ರಪತಿ ಕಚೇರಿಗೆ ಕಳುಹಿಸಲಾಗುವುದೆಂದು ಅವರು ತಿಳಿಸಿದರು.
ಈ ಮಸೂದೆಗೆ ತಮ್ಮ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಕೆ.ಪಳನಿಸ್ವಾಮಿ ತಿಳಿಸಿದರು. ಪ್ರಸಕ್ತ ನಡೆದ ಬೆಳವಣಿಗೆಯಲ್ಲಿ ತಮಿಳ್ನಾಡಿನ ವಿದ್ಯಾರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಂದ ನೀಟ್ ಗೆ ಭಾರೀ ವಿರೋಧ ವ್ಯಕ್ತವಾಗಿದೆ.