ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ

Prasthutha|

ಬೆಂಗಳೂರು: ಕೇಂದ್ರದ ಮಾಜಿ ಸಚಿವರು, ಕಾಂಗ್ರೆಸ್ ಹಿರಿಯ ನಾಯಕರಾದ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

- Advertisement -

‘ಆಸ್ಕರ್ ಅವರು ಗಾಂಧಿ ತತ್ವ ಹಾಗೂ ಸರಳತೆಗೆ ಮತ್ತೊಂದು ಹೆಸರಾಗಿದ್ದವರು. ಸಾಮಾನ್ಯ ಕುಟುಂಬದಿಂದ ಬಂದ ಅವರು ಕೇಂದ್ರ ಸಚಿವರಾಗಿ ನಮಗೆ ಉತ್ತಮ ಮಾರ್ಗದರ್ಶನ ನೀಡಿ, ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದ ಧೀಮಂತ ನಾಯಕ. ಕಷ್ಟಕಾಲದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ, ಪಕ್ಷವನ್ನು ಮುನ್ನಡೆಸಿದ್ದಾರೆ.

ಆಸ್ಕರ್ ಫರ್ನಾಂಡೀಸ್ ಅವರು ಪಕ್ಷದ ಆಸ್ತಿಯಾಗಿದ್ದವರು. ಅವರ ಮಾರ್ಗದರ್ಶನದಲ್ಲಿ ನಾವು ರಾಜಕೀಯವಾಗಿ ಬೆಳೆದು ಬಂದಿದ್ದೆವು. ಸಜ್ಜನಿಕೆ ರಾಜಕಾರಣದಿಂದ ನಮ್ಮೆಲ್ಲರಿಗೂ ಆಪ್ತರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರು ಉಡುಪಿಯಿಂದ ಲೋಕಸಭೆಗೆ ಆಯ್ಕೆಯಾಗಿ, ನಂತರ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಕಾರ್ಮಿಕ ಸಚಿವರಾಗಿದ್ದ ಫರ್ನಾಂಡೀಸ್ ಅವರು ಉತ್ತಮ ಕಾರ್ಯ ಮಾಡಿದ್ದರು.

- Advertisement -

ಆಸ್ಕರ್ ಫರ್ನಾಂಡಿಸ್ ಅವರ ಅಗಲಿಕೆ ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ. ನಾನು ಯುವ ನಾಯಕನಾಗಿದ್ದಾಗಿನಿಂದ ಅವರ ಮಾರ್ಗದರ್ಶನ ಪಡೆದಿದ್ದೆ. ಪಕ್ಷದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊತ್ತಾಗ ಅವರು ನನಗೆ ಕೊಟ್ಟ ಕೆಲವು ಸಲಹೆ ಹಾಗೂ ಸೂಚನೆಗಳು ಅಮೂಲ್ಯವಾದವು. ಪಕ್ಷದಲ್ಲಿ ನೂತನವಾಗಿ ಚಾಲಕರ ಘಟಕ ಸ್ಥಾಪಿಸಿ ಎಂದು ನನಗೆ ಸಲಹೆ ನೀಡಿದ್ದೇ ಆಸ್ಕರ್ ಫರ್ನಾಂಡಿಸ್ ಅವರು. ಹೀಗಾಗಿ ನಾನಿಂದು ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ.

ಮಂಗಳೂರು ಪ್ರವಾಸ ಮಾಡಿದಾಗೆಲ್ಲ ನಾನು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದೆ. ಇತ್ತೀಚೆಗೆ ಅವರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರಿದಾಗಲೂ ನಾನು ಹೋಗಿ ಅವರ ಆರೋಗ್ಯ ವಿಚಾರಿಸಿದ್ದೆ. ಇಂದು ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ.

ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಅಭಿಮಾನಿಗಳು, ಕಾರ್ಯಕರ್ತರಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಅವರು ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.



Join Whatsapp