ಬಿಜೆಪಿ, ಆರೆಸ್ಸೆಸ್ ದಲಿತರ ಪರ: ಬಿ.ಶ್ರೀರಾಮುಲು

Prasthutha|

ಬೆಂಗಳೂರು: ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಜಾತಿಗಳನ್ನು ಸೇರಿಸುವ ರಾಜ್ಯಗಳ ಅಧಿಕಾರವನ್ನು ಮರುಸ್ಥಾಪಿಸುವ ಸಂವಿಧಾನದ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಸರಕಾರ ಅಂಗೀಕರಿಸಿರುವುದು ಸ್ವಾಗತಾರ್ಹವಾಗಿದ್ದು, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕ್ರಮ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

- Advertisement -


ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೀಸಲಾತಿ ಮುಂದುವರಿಕೆ ಅಗತ್ಯದ ಕುರಿತಂತೆ ಆರೆಸ್ಸೆಸ್ ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಸ್ವಾಗತಾರ್ಹ. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ಮತ್ತು ಆರೆಸ್ಸೆಸ್ ಸಂಘಟನೆ ನಿರಂತರವಾಗಿ ದಲಿತರ ಪರವಾಗಿ ಕೆಲಸ ಮಾಡುತ್ತಿವೆ. ಆದರೆ, ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ಕಾಂಗ್ರೆಸ್ ಮುಖಂಡರು ಬಿಜೆಪಿ ಹಾಗೂ ಆರೆಸ್ಸೆಸ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದವು. ಈಗ ಈ ಸತ್ಯ ಜನರಿಗೂ ಅರಿವಾಗಿದೆ ಎಂದು ತಿಳಿಸಿದರು.


ಈಗ ದಲಿತರು, ಶೋಷಿತರು ಮತ್ತು ಹಿಂದುಳಿದ ವರ್ಗದವರು ಕಾಂಗ್ರೆಸ್ನ ಪೊಳ್ಳು ಭರವಸೆಯನ್ನು ಅರ್ಥೈಸಿಕೊಂಡಿದ್ದಾರೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ, ದಲಿತರ ಪರ ಕಾರ್ಯಗಳನ್ನು ಗಮನಿಸಿ ಬಿಜೆಪಿಗೆ ಪೂರ್ಣ ಪ್ರಮಾಣದಿಂದ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಎಲ್ಲ ಕಡೆಗಳಲ್ಲಿ ಬಿಜೆಪಿ ಗೆಲ್ಲುತ್ತಿದೆ ಹಾಗೂ ಕಾಂಗ್ರೆಸ್ ಪಕ್ಷ ಸೋಲುತ್ತಿದೆ ಎಂದು ತಿಳಿಸಿದರು.

- Advertisement -


ಕೇಂದ್ರದ ಸಚಿವ ಸಂಪುಟ, ರಾಜ್ಯಪಾಲರ ನೇಮಕಾತಿ ವಿಚಾರದಲ್ಲೂ ಕೇಂದ್ರ ಸರಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗೆ ಗರಿಷ್ಠ ಆದ್ಯತೆ ನೀಡಿದೆ. ಇದು ಕೇಂದ್ರದ ನರೇಂದ್ರ ಮೋದಿ ಅವರ ಬಿಜೆಪಿ ಸರಕಾರದ ದಲಿತ- ಹಿಂದುಳಿದ ಪರ ಕಾರ್ಯವೈಖರಿಯನ್ನು ಪ್ರತಿಬಿಂಬಿಸುವಂತಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು.

Join Whatsapp