ಪೊಲೀಸ್ ಇಲಾಖೆ ಸಂಘಪರಿವಾರದ ಪುಂಡಾಟಿಕೆಗೆ ಕಡಿವಾಣ ಹಾಕದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ : ಪಾಪ್ಯುಲರ್ ಫ್ರಂಟ್ ಎಚ್ಚರಿಕೆ

Prasthutha|

ಮಂಗಳೂರು: ಪ್ರಚೋದನಾಕಾರಿ ವರ್ತನೆಗಳ ಮೂಲಕ ಜಿಲ್ಲೆಯ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಸಂಘಪರಿವಾರದ ಕಾರ್ಯಕರ್ತರ ಪುಂಡಾಟಿಕೆಗೆ ಪೊಲೀಸ್ ಇಲಾಖೆ ಕಡಿವಾಣ ಹಾಕದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಅನಿವಾರ್ಯವಾದೀತು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಎಚ್ಚರಿಸಿದ್ದಾರೆ.

- Advertisement -

ಭಯೋತ್ಪಾಕದರಿಗೆ ನೆರವು ನೀಡಿದ ಆರೋಪದಡಿಯಲ್ಲಿ ಉಳ್ಳಾಲದಲ್ಲಿ ಬಂಧಿತನಾದ ವ್ಯಕ್ತಿಯ ಕುರಿತು ಪ್ರಾಥಮಿಕ ಹಂತದ ತನಿಖೆಗಳು ನಡೆಯುತ್ತಿದೆ. ಈ ಮಧ್ಯೆ ವಿ.ಎಚ್.ಪಿ ಮುಖಂಡ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಸಂಘಪರಿವಾರದ ಕಾರ್ಯಕರ್ತರು ಪ್ರಚೋದನಾಕಾರಿ ಹೇಳಿಕೆ ಹಾಗೂ ಆರೋಪಿಯ ಮನೆಗೆ ಮುತ್ತಿಗೆ ಹಾಕುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಆರೋಪಿ ತಪ್ಪಿತಸ್ಥನಾಗಿದ್ದರೆ ಆತನಿಗೆ ನ್ಯಾಯ ವ್ಯವಸ್ಥೆಯೇ ಶಿಕ್ಷೆ ವಿಧಿಸುತ್ತದೆ. ಆದರೆ ಇದರ ಹೆಸರಿನಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಸಂಘಪರಿವಾರವು ರಾದ್ಧಾಂತ ಸೃಷ್ಟಿಸುತ್ತಿದ್ದು, ಮುಂದೆ ನಡೆಯುವ ಅನಾಹುತಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗಲಿದೆ. ಮ್ಯಾನ್ ಪವರ್ ಕಂಪೆನಿಯ ಮೂಲಕ ಹಿಂದೂ ಮಹಿಳೆಯರಿಗೆ ಲೈಂಗಿಕವಾಗಿ ಹಿಂಸೆ ನೀಡಿರುವ ಗಂಭೀರ ಆರೋಪ ಹೊತ್ತಿರುವ ಶರಣ್ ಪಂಪ್ ವೆಲ್ ಇದೀಗ ಕಳೆದು ಹೋಗಿರುವ ತನ್ನ ವರ್ಚಸ್ಸನ್ನು ಮರಳಿ ಗಳಿಸಲು ಇಂತಹ ಪ್ರಹಸನವನ್ನು ನಡೆಸುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಪರಸ್ಪರ ಸೌಹಾರ್ದದಿಂದ ಇರುವ ಉಳ್ಳಾಲ ಪರಿಸರಲ್ಲಿ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ವಾತಾವರಣ ಸೃಷ್ಟಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಮತ್ತು ಶಾಂತಿ ಭಂಗ ಉಂಟು ಮಾಡಿದ ಇವರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಇವರ ಪುಂಡಾಟಿಕೆ ಕಡಿವಾಣ ಹಾಕದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪಾಪ್ಯುಲರ್ ಫ್ರಂಟ್ ಕಾನೂನಾತ್ಮಕ ಪ್ರತಿರೋಧದ ಮೂಲಕ ಇವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಇಜಾಝ್ ಅಹ್ಮದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp