ಬೆಳಗಾವಿ: ನಿನ್ನೆ ತಡರಾತ್ರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಸೇರಿದಂತೆ ಹಲವೆಡೆ ಪುಂಡಾಟ ನಡೆಸಿದ ಶ್ರೀರಾಮಸೇನೆ ಹಿಂದೂಸ್ತಾನ ಸಂಸ್ಥಾಪಕ, ಎಂಇಎಸ್ ಮುಖಂಡ ಸೇರಿದಂತೆ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಖಡೆಬಜಾರ್. ಮಾರ್ಕೆಟ್, ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕಲ್ಲು ತೂರಾಟ ನಡೆಸಿದ್ದಕ್ಕಾಗಿ ಪೊಲೀಸರು 3 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಪುಂಡಾಟ ನಡೆಸಿದ್ದಕ್ಕಾಗಿ ಶ್ರೀರಾಮ ಸೇನೆ ಹಿಂದೂಸ್ಥಾನ ಸಂಸ್ಥಾಪಕ ರಮಾಕಾಂತ ಕೊಂಡುಸ್ಕರ್, ಎಂಇಎಸ್ ಮುಖಂಡ ಶುಭಂ ಶಳಕೆ ಸೇರಿದಂತೆ 27ಕ್ಕೂ ಹೆಚ್ಚು ಪುಂಡರನ್ನು ಬಂಧಿಸಲಾಗಿದೆ.
ರಾತ್ರಿ ಕಲ್ಲು ತೂರಾಟ ನಡೆಸಿದ್ದ ದುಷ್ಕರ್ಮಿಗಳು ಪೋಲಿಸ್ ವಾಹನಗಳು, ಸರಕಾರಿ ವಾಹನಗಳು ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ್ದರು.ಎಂಇಎಸ್ ಪುಂಡ ಶುಭಂ ಶಳಕೆ, ಶ್ರೀರಾಮ ಸೇನೆ ಹಿಂದೂಸ್ತಾನ್ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಸೇರಿ 27 ಜನ ಪುಂಡರನ್ನು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೇ ವೇಳೆ ಶಿವಾಜಿ ಪ್ರತಿಮೆಗೆ ಮಸಿ ಬಳೆದಿದ್ದಕ್ಕಾಗಿ ಬೆಳಗಾವಿಯಲ್ಲಿ ಶಿವಸೇನೆ ಪುಂಡರು ಬೆಳಗಾವಿಯ ಶಿವಾಜಿ ಗಾರ್ಡನ್ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.