ಸಿಯೋಲ್: ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೈ ಮ್ಯೂಂಗ್ ಅವರಿಗೆ ದುಷ್ಕರ್ಮಿಯೊಬ್ಬ ಸಾರ್ವಜನಿಕ ಪ್ರದೇಶದಲ್ಲೇ ಚಾಕುವಿನಿಂದ ಇರಿದಿದ್ದಾನೆ.
ಪ್ರಮುಖ ಪ್ರತಿಪಕ್ಷ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥರಾಗಿರುವ ಲೀ ಅವರು ಪತ್ರಕರ್ತರ ಜತೆ ಪ್ರಶ್ನೋತ್ತರ ಅವಧಿಯಲ್ಲಿ ಭಾಗಿಯಾಗಿದ್ದಾಗ ದುಷ್ಕರ್ಮಿಯೊಬ್ಬ ಕುತ್ತಿಗೆಯ ಎಡ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕ ಲೀ ಜೈ ಮ್ಯೂಂಗ್ ಅವರು ಬುಸಾನ್ ನ ಗಡೆಯೊಕ್ ದ್ವೀಪದಲ್ಲಿ ನಿರ್ಮಾಣವಾಗುತ್ತಿರುವ ಹೊಸ ವಿಮಾನ ನಿಲ್ದಾಣವನ್ನು ವೀಕ್ಷಿಸಲು ತೆರಳಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ದುಷ್ಕರ್ಮಿಯೋರ್ವ 59 ವರ್ಷದ ಲೀ ಜೈ ಮ್ಯೂಂಗ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.