28 ವರ್ಷ ಹಳೆಯ ಸಿಸ್ಟರ್ ಅಭಯಾ ಕೊಲೆ ಕೇಸ್ | ಇಬ್ಬರು ದೋಷಿಗಳು; ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟ

Prasthutha|

ತಿರುವನಂತಪುರಂ : 1992ರ ಕೊಟ್ಟಾಯಂನ ಸಿಸ್ಟರ್ ಅಭಯಾ (21) ಕೊಲೆ ಪ್ರಕರಣದಲ್ಲಿ ಇಬ್ಬರನ್ನು ದೋಷಿಗಳೆಂದು ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಇಂದು ತೀರ್ಪು ನೀಡಿದೆ. 28 ವರ್ಷಗಳ ಹಳೆಯ ಈ ಕೇಸ್ ಗೆ ಸಂಬಂಧಿಸಿ ಇಂದು ತೀರ್ಪು ಹೊರಬಿದ್ದಿದ್ದು, ಪ್ರಕರಣದಲ್ಲಿ ಸಿಸ್ಟರ್ ಅಭಯಾ ಅವರನ್ನು ಹತ್ಯೆ ಮಾಡಿ, ಬಾವಿಯೊಂದಕ್ಕೆ ಎಸೆಯಲಾಗಿತ್ತು.

ಪ್ರಕರಣದಲ್ಲಿ ಚರ್ಚ್ ಪಾದ್ರಿ ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ದೋಷಿಗಳೆಂದು ಪರಿಗಣಿಸಲಾಗಿದೆ. ಫಾದರ್ ಥಾಮಸ್ ಕೊಟ್ಟಾಯಂನ ಬಿಸಿಎಂ ಕಾಲೇಜಿನಲ್ಲಿ ಸಿಸ್ಟರ್ ಅಭಯಾಗೆ ಮನಶಾಸ್ತ್ರ ವಿಷಯವನ್ನು ಬೋಧಿಸಿದ್ದರು. ಥಾಮಸ್ ಬಳಿಕ, ಬಿಷಪ್ ಮತ್ತು ಕೊಟ್ಟಾಯಂ ಕ್ಯಾಥೊಲಿಕ್ ಡಯಾಸಿಸ್ ನ ಚಾನ್ಸಲರ್ ಹುದ್ದೆಗೂ ನೇಮಕಗೊಂಡಿದ್ದರು.

- Advertisement -

ಇನ್ನೋರ್ವ ದೋಷಿ ಸಿಸ್ಟರ್ ಸೆಫಿ ಆ ವೇಳೆ ಸಿಸ್ಟರ್ ಅಭಯಾ ಜೊತೆಗೆ ಒಂದೇ ಹಾಸ್ಟೆಲ್ ನಲ್ಲಿದ್ದರು ಮತ್ತು ಹಾಸ್ಟೆಲ್ ನ ಉಸ್ತುವಾರಿ ನಿರ್ವಹಿಸುತ್ತಿದ್ದರು. ಬುಧವಾರ ಶಿಕ್ಷೆಯ ಪ್ರಮಾಣ ಘೋಷಣೆಯಾಗಲಿದೆ.

ಹತ್ಯೆ, ಸಾಕ್ಷ್ಯ ನಾಶದ ಆರೋಪ ಇಬ್ಬರ ವಿರುದ್ಧವೂ ಸಾಬೀತಾಗಿದೆ. ಥಾಮಸ್ ವಿರುದ್ಧ ಅಕ್ರಮ ಪ್ರವೇಶಕ್ಕೆ ಸಂಬಂಧಿಸಿಯೂ ದೋಷಾರೋಪ ಸಾಬೀತಾಗಿದೆ.

- Advertisement -