ಗೋಶಾಲೆಗಳಲ್ಲಿ ಗೋವುಗಳ ಪಾಲನೆಗೆ ಯೋಗಿ ಸರಕಾರದಿಂದ ಅನುದಾನ ಸಿಗುತ್ತಿಲ್ಲ | 15,000 ದನಗಳನ್ನು ಹೊರಬಿಡುವ ಎಚ್ಚರಿಕೆ

Prasthutha|

ಲಖನೌ : ಈಗಾಗಲೇ ಇರುವ ಕಾನೂನುಗಳಿಗೆ ಅಲ್ಪಸ್ವಲ್ಪ ತಿದ್ದುಪಡಿ ಮಾಡಿ, ಹೊಸ ಕಾನೂನು ರಚಿಸಿದ್ದೇವೆ ಎಂದು ತಮ್ಮ ಕಾರ್ಯಕರ್ತರಲ್ಲಿ ಭ್ರಮೆ ಹುಟ್ಟಿಸುವ ಬಿಜೆಪಿಗರು ನಿಜಾರ್ಥದಲ್ಲಿ ತಾವು ಆಡಿದಂತೆ ನಡೆದುಕೊಳ್ಳುವವರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಗೋಹತ್ಯೆ ನಿಷೇಧ ಕಾನೂನು ತಂದಿದ್ದೇವೆ ಎಂದು ಹೇಳುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರಕಾರದ ವಿರುದ್ಧ ಗೋವುಗಳ ರಕ್ಷಣೆಗೆ ಸೂಕ್ತ ಅನುದಾನ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಗೋವುಗಳ ರಕ್ಷಣೆಗಾಗಿ ಗೋಶಾಲೆಗಳನ್ನು ಆರಂಭಿಸಲು ಬೇಕಾದ ‘ಗೋಶಾಲಾ ಪರಿಯೋಜನಾ’ ಎಂಬ ಯೋಜನೆಯನ್ನು ಯೋಗಿ ಆದಿತ್ಯನಾಥ್ ಸರಕಾರ ಘೋಷಿಸಿತ್ತು. ಆದರೆ ಈಗ ಈ ಗೋಶಾಲೆಗಳಲ್ಲಿ ಗೋವುಗಳ ಸಾಕಣಿಕೆಗೆ ಬೇಕಾದಷ್ಟು ಅನುದಾನ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿವೆ. ಕಳೆದ ಕೆಲವು ತಿಂಗಳುಗಳಿಂದ ಗೋಶಾಲೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ, ಗೋಶಾಲೆಯಲ್ಲಿ ಗೋವುಗಳನ್ನು ನಿರ್ವಹಿಸಲು ಕಷ್ಟವಾಗಿದ್ದು, ಗೋವುಗಳ ಸಾವೂ ಸಂಭವಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.

- Advertisement -

ಬುಂದೇಲ್ ಖಂಡ ಪ್ರಾಂತ್ಯದ ಒಂದು ಡಜನ್ ಗೂ ಹೆಚ್ಚು ಗ್ರಾಮ ಪಂಚಾಯತ್ ಗಳ ಪ್ರಮುಖರು ಈ ಸಂಬಂಧ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದಾರೆ. ಅನುದಾನ ಬಿಡುಗಡೆಗೊಳಿಸದಿದ್ದರೆ, 15,000ಕ್ಕೂ ಹೆಚ್ಚು ದನಗಳನ್ನು ಬಿಟ್ಟುಬಿಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಾವು 2018ರಿಂದ 43 ಗೋಶಾಲೆಗಳನ್ನು ನಡೆಸುತ್ತಿದ್ದೇವೆ. ಡಿ.25ರೊಳಗೆ ಗೋಶಾಳೆ ನಿರ್ವಹಣೆಗೆ ಅನುದಾನ ಬಿಡುಗಡೆಗೊಳಿಸದಿದ್ದಲ್ಲಿ, ಗೋವುಗಳನ್ನು ಗೋಶಾಲೆಗಳಿಂದ ಹೊರಬಿಡಲು ಆರಂಭಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.     

- Advertisement -