ಬಿಜೆಪಿಯ ಬುಲ್ಡೋಜರ್ ರಾಜಕೀಯವನ್ನು ಟೀಕಿಸಿದ ಸಿಸೋಡಿಯಾ; ಕೂಡಲೆ ಕಾರ್ಯಾಚರಣೆ ನಿಲ್ಲಿಸಲು ಶಾಗೆ ಪತ್ರ

Prasthutha|

ನವದೆಹಲಿ: “ದೆಹಲಿ ಪಾಲಿಕೆಗಳಲ್ಲಿ ಬಿಜೆಪಿಯ ಅಧಿಕಾರಾವಧಿ ಮುಗಿದಿದ್ದರೂ, ಬಿಜೆಪಿಯವರು ದಿಲ್ಲಿಯಲ್ಲಿ ಹೊಲಸು ಬುಲ್ಡೋಜರ್ ರಾಜಕೀಯವನ್ನು ಮಾಡುತ್ತಿದ್ದಾರೆ. ಕೂಡಲೆ ಮಧ್ಯ ಪ್ರವೇಶಿಸುವಂತೆ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ” ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

- Advertisement -

ಒತ್ತುವರಿ ತೆರವು ಹೆಸರಿನಲ್ಲಿ ಬಿಜೆಪಿಯು ಅಗ್ಗದ, ಅನ್ಯಾಯದ ಬುಲ್ಡೋಜಿಂಗ್ ರಾಜಕೀಯ ನಡೆಸಿದೆ ಎಂದು ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಸಿಸೋಡಿಯಾ, ನಿಮ್ಮ ದಿಲ್ಲಿ ನಾಯಕರು ನಡೆಸುತ್ತಿರುವ ಕೆಟ್ಟ ಕಾರ್ಯಾಚರಣೆಯನ್ನು ಮಧ್ಯ ಪ್ರವೇಶಿಸಿ ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.

ಕೇಸರಿ ಪಡೆಯು 63 ಲಕ್ಷ ಮನೆಗಳನ್ನು ಉರುಳಿಸಿ, ದಿಲ್ಲಿಯ ಸ್ಲಂಗಳನ್ನೆಲ್ಲ ನೆಲಸಮ ಮಾಡಿ ದಿಲ್ಲಿಯ 70 ಶೇಕಡಾ ಜನರಿಗೆ ವಸತಿ ಇಲ್ಲದಂತೆ ಮಾಡಿದೆ ಎಂದು ಸಿಸೋಡಿಯಾ ಆರೋಪ ಮಾಡಿದರು.

- Advertisement -

“ದಿಲ್ಲಿ ಪಾಲಿಕೆಯಲ್ಲಿ ಬಿಜೆಪಿಯ ಅಧಿಕಾರಾವಧಿ ಮುಗಿದಿದೆ. ಕೊಳಕು ರಾಜಕೀಯ ಮಾಡಲು ಅವರು ಯಾವ ಹಂತಕ್ಕೂ ಹೋಗಬಲ್ಲರು ಎಂಬುದು ಸಾಬೀತಾಗಿದೆ” ಎಂದು ಸಿಸೋಡಿಯಾ ಟೀಕಿಸಿದ್ದಾರೆ.

ದಿಲ್ಲಿ ಪಾಲಿಕೆಯ ಒತ್ತುವರಿ ತೆರವು ಕಾರ್ಯಾಚರಣೆಯು ತೀರಾ ನೀಚ, ಅತಿ ಅಗ್ಗದ ಬುಲ್ಡೋಜರ್ ರಾಜಕೀಯ ಎಂಬುದು ಸ್ಪಷ್ಟವಾಗಿದೆ. ಇವನ್ನೆಲ್ಲ ಸಿಸೋಡಿಯಾ ಗೃಹ ಸಚಿವರಿಗೂ ಸ್ಪಷ್ಟವಾಗಿ ಬರೆದು ತಿಳಿಸಿದ್ದಾರೆ. ದಿಲ್ಲಿ ನಾಯಕರ ಮೇಲೆ ಕೇಸರಿ ನಾಯಕತ್ವಕ್ಕೆ ಹಿಡಿತ ಇಲ್ಲವೇ ಎಂದೂ ಸಿಸೋಡಿಯಾ ಪ್ರಶ್ನಿಸಿದ್ದಾರೆ.

ಎಎಪಿ- ಆಮ್ ಆದ್ಮಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನಗರದ ಪ್ರತಿಯೊಂದು ಕಡೆಯೂ ಮನೆ ಮೇಲೆ ಬುಲ್ಡೋಜರ್ ಹರಿಯುವುದನ್ನು ತಡೆಯಲು ಶತ ಪ್ರಯತ್ನ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದರು.

“ದಿಲ್ಲಿಯಲ್ಲಿ 1,750 ಅಧಿಕೃತವಲ್ಲದ ಕಾಲೋನಿಗಳಿವೆ. ಅಲ್ಲಿ 50 ಲಕ್ಷ ಜನರು ವಾಸಿಸುತ್ತಿದ್ದಾರೆ. ಇನ್ನು 860 ಸ್ಲಮ್ ಗಳು ಅಧಿಕೃತವಾಗಿದ್ದು ಅಲ್ಲಿ 10 ಲಕ್ಷ ಜನರು ವಾಸಿಸುತ್ತಿದ್ದಾರೆ. ಬಿಜೆಪಿ ಇವೆಲ್ಲವನ್ನೂ ಬುಲ್ಡೋಜ್ ಮಾಡಿ ಇವರನ್ನೆಲ್ಲ ಮನೆ ಇಲ್ಲದವರನ್ನಾಗಿ ಮಾಡುತ್ತಿದೆ. ಕೇಸರಿ ನಾಯಕರು ಪ್ರತಿ ದಿನ ಯಾವುದಾದರೂ ಒಂದು ಕಾಲೋನಿಗೆ ಬುಲ್ಡೋಜರ್ ನೊಡನೆ ಹೋಗುತ್ತಾರೆ. ಇದು ತೀರಾ ಅನ್ಯಾಯ” ಎಂದು ಸಿಸೋಡಿಯಾ ಹೇಳಿದರು.

ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ- ಡಿಡಿಎ ಅಧಿಕೃತ ಪ್ರದೇಶದಲ್ಲಿ ವಾಸಿಸುವ 3 ಲಕ್ಷ ಜನರಿಗೆ ಮಾತ್ರ ಒತ್ತುವರಿ ಮಾಡಿದ್ದೀರಿ ಎಂದು ನೋಟೀಸು ನೀಡಿದೆ. ಇವೆಲ್ಲ ಒಂದೆರಡು ಅಡಿ ಜಗಲಿ ನಿರ್ಮಾಣ, ಗೂಡಂಗಡಿ ಇಲ್ಲವೇ ಟೆರೇಸ್ ಮುಂಭಾಗ ಆಗಿದೆ. ದಿಲ್ಲಿಯಲ್ಲಿ ಹೀಗೆ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳದ ಮನೆ ಯಾವುದೂ ಇಲ್ಲ ಎಂದು ಸಹ ಸಿಸೋಡಿಯಾ ತಿಳಿಸಿದರು. 

“ಕಳೆದ 17 ವರುಷಗಳಿಂದ ಬಿಜೆಪಿಯ ಪಾಲಿಕೆ ನಾಯಕರು, ಮೇಯರ್ ಗಳು, ಕೌನ್ಸಿಲರ್ ಗಳು, ಜೂನಿಯರ್ ಎಂಜಿನಿಯರ್ ಗಳು ತಮ್ಮ ಕಿಸೆಗೆ ಲಂಚದ ಹಣ ತುಂಬಿಸಿಕೊಂಡು ಅಧಿಕೃತ ಕಾಲೋನಿಗಳಲ್ಲಿ ಇಂಥ ಅಕ್ರಮ ಕಟ್ಟಡ ನಿರ್ಮಾಣವಾಗುವಂತೆ ಮಾಡಿದ್ದಾರೆ. ಈಗ ಪಾಲಿಕೆಗಳಲ್ಲಿ ಅದರ ಅವಧಿ ಮುಗಿದ ಮೇಲೆ ಮುಗ್ಧ ಜನರನ್ನು ಮನೆಯಿಲ್ಲದವರನ್ನಾಗಿ ಮಾಡುತ್ತ ಕೆಡವುವ ರಾಜಕೀಯ ನಡೆಸಿದೆ” ಎಂದು ಸಿಸೋಡಿಯಾ ಆರೋಪ ಮಾಡಿದರು.

17 ವರುಷಗಳ ಹಿಂದೆ ನೀವು ಇದನ್ನು ಯಾಕೆ ನಿಲ್ಲಿಸಲಿಲ್ಲ, ಜನರು ಅನಧಿಕೃತವಾಗಿ ಜಾಗ ಕೊಂಡುಕೊಂಡು ಮನೆ ಕಟ್ಟಿಸಿಕೊಂಡ ಕಾಲದಲ್ಲಿ ಬಿಟ್ಟು ಈಗ ಉರುಳಿಸುತ್ತೀರಾ ಎಂದು ಸಿಸೋಡಿಯಾ ಪ್ರಶ್ನಿಸಿದರು.

ಬಿಜೆಪಿಯ ಈ ಯೋಜನೆಯು ಅಪಾಯಕಾರಿಯಾದುದಾಗಿದ್ದು, ಇಡೀ ದಿಲ್ಲಿಯನ್ನು ನಾಶ ಮಾಡಲಿದೆ ಎಂದು ಸಿಸೋಡಿಯಾ ಆತಂಕ ವ್ಯಕ್ತಪಡಿಸಿದರು. “ಇದು ನನ್ನ ನಮ್ರ ಮನವಿ, ಈ ಅಪಾಯಕಾರಿ ಬುಲ್ಡೋಜರ್ ಓಡಿಸುವ ಡೆಮಾಲಿಶನ್ ರಾಜಕೀಯವನ್ನು ನಿಮ್ಮ ದಿಲ್ಲಿ ನಾಯಕರು ನಡೆಸದಂತೆ ಕೂಡಲೆ ತಡೆಯಿರಿ. ನಿಮ್ಮ ಬಿಜೆಪಿ ಕೌನ್ಸಿಲರ್ ಗಳಿಗೆ, ಮೇಯರ್ ಗಳಿಗೆ, ಅಧಿಕಾರಿಗಳಿಗೆ ಮೊದಲು ಹೇಗೆ ಕಟ್ಟಲು ಪರವಾನಿಗೆ ನೀಡಿದ್ದೀರಿ ಎಂದು ವಿಚಾರಿಸಿರಿ. ಬಡವರ ಮನೆಗಳನ್ನು ಉರುಳಿಸಿ ಅವರ ಅನ್ನಕ್ಕೆ ಕಲ್ಲು ಹಾಕಿ ಬೀದಿಗೆ ಬೀಳಿಸುವ ಬದಲು ಅವರಿಗೆ ಕಟ್ಟುವಾಗ ಅವಕಾಶ ನೀಡಿದ, ಶುಲ್ಕ ಪಡೆದ ಎಲ್ಲ ನಾಯಕರ, ಎಂಜಿನಿಯರ್ ಗಳ, ಅಧಿಕಾರಿಗಳ ಮನೆ ಉರುಳಿಸಿರಿ. ಈ ವಿಷಯದಲ್ಲಿ ನೀವು ಕೂಡಲೆ ಮಧ್ಯ ಪ್ರವೇಶಿಸಿ ಈ ಬುಲ್ಡೋಜರ್ ರಾಜಕೀಯವನ್ನು ನಿಲ್ಲಿಸಬೇಕು” ಎಂದು ಶಾರಿಗೆ ಸಿಸೋಡಿಯಾರು ಪತ್ರದಲ್ಲಿ ಕೇಳಿಕೊಂಡಿದ್ದಾರೆ



Join Whatsapp