ಅತಿಥಿ ಉಪನ್ಯಾಸಕರ ಬೇಡಿಕೆ ಶೀಘ್ರ ಈಡೇರಿಸಲು ಎಸ್.ಐ.ಒ ಒತ್ತಾಯ

Prasthutha|

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ 14,183 ಉಪನ್ಯಾಸಕರು ಕಳೆದ ಕೆಲವು ದಿನಗಳಿಂದ ಬೋಧನಾ ತರಗತಿಗಳನ್ನು ತೊರೆದು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಪರಿಶೀಲಿಸಿ ಈಡೇರಿಸಬೇಕು ಎಂದು ಎಸ್.ಐ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

- Advertisement -

ಶಿಕ್ಷಣವು ಸಂವಿಧಾನದ ಮೂಲಭೂತ ಹಕ್ಕಾಗಿದ್ದು, ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1,690 ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದು ವಿದ್ಯಾರ್ಥಿಗಳಿಗೆ ಹೇಗೆ ತಾನೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಅನೇಕ ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ.55ರಷ್ಟು ಅಂಕಗಳನ್ನು ಪಡೆದಿದ್ದು, ಎನ್ಇಟಿ/ಎಸ್ಎಲ್ಇಟಿ ಅಥವಾ ಪಿ.ಎಚ್ ಡಿ ಪಡೆದುಕೊಂಡಿರುವ ಅತಿಥಿ ಉಪನ್ಯಾಸಕರಿಗೆ ರೂ.13,000 ಹಾಗೂ ಸ್ನಾತಕೋತ್ತರ/ಎಂ.ಫಿಲ್ ಪದವೀಧರ ಅತಿಥಿ ಉಪನ್ಯಾಸಕರಿಗೆ ರೂ.11,000 ಗಳ ಮಾಸಿಕ ಗೌರವ ಸಂಭಾವನೆಯನ್ನು ನೀಡಲಾಗುತ್ತಿದೆ. ಆದರೆ ಈ ಗೌರವಧನವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ವರ್ಷದ ಎಂಟು ತಿಂಗಳು ಮಾತ್ರ ಕೊಡಲಾಗುತ್ತಿದ್ದು ಈ ಅಲ್ಪವೇತನ ಪಡೆದುಕೊಂಡು ಇಂದಿನ ಹಣದುಬ್ಬರದ ದಿನಮಾನಗಳಲ್ಲಿ ಅತಿಥಿ ಉಪನ್ಯಾಸಕರು ಸಂಸಾರವನ್ನು ನಡೆಸಲು ತೀರಾ ಕಷ್ಟವನ್ನು ಎದುರಿಸುತ್ತಿದ್ದಾರೆ. ಉಪನ್ಯಾಸಕರಿಗೆ ಗೌರವಧನ ಹೆಚ್ಚಳದ ಜೊತೆಗೆ ಉದ್ಯೋಗ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ಉಪನ್ಯಾಸಕರ ಅಳಲಿಗೆ ಸ್ಪಂದಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp