ಅರ್ಚನಾ ರೆಡ್ಡಿ ಕೊಲೆ ಪ್ರಕರಣ: ಪುತ್ರಿ, ಪತಿ ಸೇರಿ 7 ಮಂದಿ ಸೆರೆ

Prasthutha|

ಬೆಂಗಳೂರು: ಹೊಸರೋಡ್ ಸಿಗ್ನಲ್ ಬಳಿ ನಡು ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಮಹಿಳೆಯನ್ನು ಕೊಲೆಗೈದ ಪ್ರಕರಣ  ಸಂಬಂಧ ಕೊಲೆಯಾದ ಮಹಿಳೆಯ ಪುತ್ರಿ ಯುವಿಕಾ ಎಂಬಾಕೆಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಜಿಗಣಿ ಮೂಲದ ಬೆಳ್ಳಂದೂರಿನಲ್ಲಿ ವಾಸವಿದ್ದ ಅರ್ಚನಾ ರೆಡ್ಡಿ (42)ಯನ್ನು ಕಳೆದ  ಡಿ.27ರಂದು ರಾತ್ರಿ ಕೊಲೆಗೈದ ಪ್ರಕರಣದ ಸಂಬಂಧ ಆಕೆಯ ಪುತ್ರಿ ಯುವಿಕಾ ರೆಡ್ಡಿ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಯುವಿಕಾ ರೆಡ್ಡಿ 5ನೇ ಆರೋಪಿಯಾಗಿದ್ದರೆ, ಮೊದಲ ಆರೋಪಿ ನವೀನ್ ಕುಮಾರ್ (ಅರ್ಚನಾ ಮೂರನೇ ಪತಿ) ಆಗಿದ್ದಾನೆ.

- Advertisement -

ಉಳಿದ ಆರೋಪಿಗಳಾದ ಬಂಧಿತ ಸಂತೋಷ್, ಅನೂಪ್, ಆನಂದ್ , ನರೇಂದ್ರ ಹಾಗೂ  ದೀಪು  ಮೊದಲ ಆರೋಪಿ ನವೀನ್ ನ ಸ್ನೇಹಿತರಾಗಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ಹೊಸರೋಡ್ ಸಿಗ್ನಲ್ ಬಳಿ  ಇನ್ನೋವಾ ಕಾರಿನಲ್ಲಿ ಹೋಗುತ್ತಿದ್ದ ಅರ್ಚನಾ ರೆಡ್ಡಿಯನ್ನು ಡಿ. 27ರಂದು ರಾತ್ರಿ 10.30ರ ವೇಳೆ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸಿಸಿ ಟಿವಿ ಆಧಾರದ ಮೇಲೆ ಈ ಕೊಲೆ ಪ್ರಕರಣ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ತನಿಖೆಯಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ಸಂಬಂಧ ಇದೀಗ ಏಳು ಆರೋಪಿಗಳನ್ನು ಬಂಧಿಸಿದ್ದೇವೆ. ಆಸ್ತಿಯನ್ನು ಕಬಳಿಸಲು ಈ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ಕೊಲೆ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ.

ಮೊದಲ ಆರೋಪಿ ಹಾಗೂ ಕೊಲೆಯಾದ ಅರ್ಚನಾ ಪತಿ-ಪತ್ನಿಯರಾಗಿದ್ದರು. ಕೊಲೆ ಪ್ರಕರಣದಲ್ಲಿ ಕೊಲೆಯಾದಾಕೆಯ ಮಗಳೂ ಕೂಡ ಆರೋಪಿಯಾಗಿದ್ದಾಳೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದಿದ್ದಾರೆ

Join Whatsapp