ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕ ತೆರುವ ಶಕ್ತಿ ಜನರಿಗೆ ಇಲ್ಲ. ಆಮ್ಲಜನಕದ ದಾಸ್ತಾನಿಲ್ಲ, ರೆಮಿಡಿಸಿವಿರ್ ನಂತಹ ಜೀವರಕ್ಷಕ ಔಷಧಿಯ ಕೊರತೆ ಇದೆ. ಮುಖ್ಯಮಂತ್ರಿ ಆಸ್ಪತ್ರೆಯಲ್ಲಿದ್ದಾರೆ, ರಾಜ್ಯ ಬಿಜೆಪಿ ಸರ್ಕಾರ ಐ.ಸಿ.ಯು ನಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಮಾರಣಾಂತಿಕವಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಲಿಕ್ಕಾಗದ ರಾಜ್ಯ ಬಿಜೆಪಿ ಸರ್ಕಾರ ಜನತೆಯ ಮುಂದೆ ಬೆತ್ತಲಾಗುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ವಿಫಲ ಪ್ರಯತ್ನದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ಕೊರೊನಾದಿಂದ ರಕ್ಷಿಸಿಕೊಳ್ಳಲು ಜನತೆಗೆ ನಿಯಮ-ನಿರ್ಬಂಧ-ಮಾರ್ಗಸೂಚಿಗಳ ಉಪದೇಶ ಮಾಡುವುದರ ಜೊತೆಗೆ, ಕೊರೊನಾ ಎದುರಿಸಲು ರಾಜ್ಯ ಬಿಜೆಪಿ ಸರ್ಕಾರ ಏನು ಮಾಡಿದೆ ಎನ್ನುವುದನ್ನು ಜನತೆಗೆ ತಿಳಿಸಲು ತಕ್ಷಣ ಶ್ವೇತಪತ್ರ ಹೊರಡಿಸಬೇಕು. ವರ್ಷದ ಹಿಂದೆ ಮೊದಲ ಬಾರಿ ಕೊರೊನಾ ದಾಳಿ ಇಟ್ಟಾಗ ಅದು ಅನಿರೀಕ್ಷಿತ ಆಘಾತ. ಒಂದು ವರ್ಷದ ಅನುಭವದಿಂದ ರಾಜ್ಯ ಸರ್ಕಾರ ಕೊರೊನಾ ಎದುರಿಸಲು ತನ್ನನ್ನು ಇನ್ನಷ್ಟು ಸಜ್ಜುಗೊಳಿಸಬೇಕಾಗಿತ್ತು. ಕೊರೊನಾವನ್ನೂ ತನ್ನ ಭ್ರಷ್ಟತೆಗೆ ಬಳಸಿಕೊಂಡ ಬಿಜೆಪಿ ಸರ್ಕಾರ ಈಗ ಕೈಚೆಲ್ಲಿ ಕೂತಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೇ ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಸಚಿವರ ಮೇಲಾಗಲಿ, ಶಾಸಕರ ಮೇಲಾಗಲಿ ನಿಯಂತ್ರಣವೇ ಇಲ್ಲದೆ ನಿರ್ಮಾಣಗೊಂಡಿರುವ ಅರಾಜಕತೆಯೇ ಇಂದಿನ ದುಸ್ಥಿತಿಗೆ ಕಾರಣ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.