ಮೈಸೂರು: ಕೆರೂರು ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಪರಿಹಾರದ ಹಣವನ್ನು ಎಸೆದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಹಿಳೆಯ ಆಕ್ರೋಶದಲ್ಲಿ ತಪ್ಪಿಲ್ಲ, ಇಂತಹ ಘಟನೆಗೆ ಕಾರಣರಾದವರನ್ನು ಪ್ರಶ್ನೆ ಮಾಡಬೇಕು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೆರೂರು ಗುಂಪು ಘರ್ಷಣೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರ ಆರೋಗ್ಯ ವಿಚಾರಿಸಲು ತೆರಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, 2 ಲಕ್ಷ ರೂಪಾಯಿ ಪರಿಹಾರ ಹಣ ನೀಡಿದ್ದರು. ನಮಗೆ ದುಡ್ಡು ಬೇಡ, ಕೆರೂರಿನಲ್ಲಿ ಶಾಂತಿ ನೆಲೆಸುವಂತಾಗಬೇಕು ಎಂದು ಆಗ್ರಹಿಸಿದ ಗಾಯಾಳು ಕುಟುಂಬದ ಮಹಿಳೆ ರಜ್ಮಾ, ಸಿದ್ದರಾಮಯ್ಯ ಅವರ ಕಾರಿನ ಮೇಲೆ ಪರಿಹಾರದ ಹಣ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಘಟನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಮಹಿಳೆಯ ಆಕ್ರೋಶ ತಪ್ಪಲ್ಲ. ಶಾಂತಿ ಕದಡುವ ಕೆಲಸ ಮಾಡುತ್ತಿರುವ ಸರ್ಕಾರ ಈ ಬಗ್ಗೆ ಉತ್ತರ ಕೊಡಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಬೇಕು. ಯಾರೂ ಕೂಡ ಅರ್ಜಿ ಹಾಕಿ ಹುಟ್ಟುವುದಿಲ್ಲ, ಭಗವಂತನ ಪ್ರೇರಣೆ.. ಸಂಘರ್ಷದ ವಾತಾವರಣ ನಿರ್ಮಾಣ ಮಾಡುತ್ತಿರುವವರನ್ನು ಪ್ರಶ್ನೆ ಮಾಡಬೇಕು ಎಂದರು.