ಮಕ್ಕಳಿಗೆ ಮೀಸಲಿಟ್ಟ ಮೊಟ್ಟೆಯ ಹಣವನ್ನೂ ನುಂಗಿ ನೀರು ಕುಡಿದ ಸರ್ಕಾರ: ಸಿದ್ದರಾಮಯ್ಯ ಟೀಕಾಪ್ರಹಾರ

Prasthutha|

ಬೆಂಗಳೂರು, ಆ.29: ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತಗಳಿಂದಲೇ ಎರಡು ವರ್ಷ ಪೂರೈಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

- Advertisement -

ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೀವಿ ಎಂದು ಜನರನ್ನು ನಂಬಿಸಿ ರಾಜ್ಯವನ್ನು ಲೂಟಿ ಹೊಡೆದರು. ಕೊರೋನ ಸಂದರ್ಭದಲ್ಲೂ ವಿಪರೀತ ಭ್ರಷ್ಟಾಚಾರ ನಡೆಸಿದ್ದು ಮಾತ್ರವಲ್ಲದೆ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಲಿಕ್ಕಾಗಿ ಮೀಸಲಿಟ್ಟ ಮೊಟ್ಟೆಯ ಹಣವನ್ನೂ ಸರ್ಕಾರ ನುಂಗಿ ನೀರು ಕುಡಿಯಿತು ಎಂದು ಅವರು ಕಿಡಿ ಕಾರಿದ್ದಾರೆ.

ಎರಡು ವರ್ಷಗಳ ಬಿಜೆಪಿ ಸರ್ಕಾರದ ವೈಫಲ್ಯಗಳ ಕುರಿತ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

- Advertisement -

ಕೊರೋನಾ ಸಲಕರಣೆಗಳು ವೆಂಟಿಲೇಟರ್, ಸ್ಯಾನಿಟೈಸರ್, ಪಿಪಿಇ ಕಿಟ್‌ ಗಳ ಖರೀದಿಯಲ್ಲೂ ಲಂಚ ತಿಂದರು. ಮಾರುಕಟ್ಟೆ ದರಕ್ಕಿಂತ ಎರಡು ಮೂರು ಪಟ್ಟು ಹೆಚ್ಚಿನ ಬೆಲೆಗೆ ಖರೀದಿ ಮಾಡಿ ನೂರಾರು ಕೋಟಿ ಬಿಲ್ ಮಾಡಿಕೊಂಡರು. ಕೊರೋನ ಕಾಲದ ಭ್ರಷ್ಟಾಚಾರವನ್ನು ವಿಧಾನಸಭೆಯಲ್ಲಿ ದಾಖಲೆ ಸಮೇತ ಬಹಿರಂಗಗೊಳಿಸಿದೆ.
ಇದ್ಯಾವುದಕ್ಕೂ ಮುಖ್ಯಮಂತ್ರಿಗಳು ಉತ್ತರ ಕೊಡಲೇ ಇಲ್ಲ. ಆರೋಗ್ಯ ಸಚಿವ ಸುಧಾಕರ್ ನಾನು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡರು. ಆದರೂ ಭ್ರಷ್ಟಾಚಾರ ನಡೆದೇ ಇಲ್ಲ ಎಂದು ವಾದಿಸಿ ಸುಳ್ಳು ಹೇಳಿದರು. ಕೊರೋನ ಸಾವಿನ ಪ್ರಮಾಣದಲ್ಲೂ ಸರ್ಕಾರ ವಿಪರೀತ ಸುಳ್ಳು ಹೇಳಿದೆ. ಸರ್ಕಾರ ಹೇಳುತ್ತಿರುವುದಕ್ಕೂ 10 ಪಟ್ಟು ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿದರು.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಬಗ್ಗೆಯೂ ಸುಳ್ಳು ಹೇಳಿದರು. ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ್ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು ಕೇವಲ ಮೂರೇ ಮಂದಿ ಎಂದು ಸುಳ್ಳು ಹೇಳಿದರು. ಆದರೆ ಮೃತಪಟ್ಟವರು 24 ಕ್ಕೂ ಹೆಚ್ಚು ಮಂದಿ. ಇವರ ಸುಳ್ಳುಗಳಿಗೆ ಇದೊಂದು ಉದಾಹರಣೆ ಅಷ್ಟೆ ಎಂದು ಸಿದ್ದರಾಮಯ್ಯ ಹೇಳಿದರು.
ಆಕ್ಸಿಜನ್ ಕೊರತೆಯಿಂದ ಯಾರೂ ಮೃತಪಟ್ಟೇ ಇಲ್ಲ ಎಂದು ಕೇಂದ್ರವೂ ಸುಳ್ಳು ಹೇಳುತ್ತಿದೆ. ಇಡೀ ದೇಶದಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಕೊರೋನ ನಿರ್ವಹಣೆಯಲ್ಲಿನ ವೈಫಲ್ಯದಿಂದಲೇ ಮೃತಪಟ್ಟಿದ್ದಾರೆ. ಎರಡನೇ ಅಲೆ ಬಂದಿದ್ದು

ಲಾಕ್‌ ಡೌನ್ ಸಂದರ್ಭದಲ್ಲಿ ದುಡಿಯುವ ವರ್ಗಗಳು ಕೆಲಸವಿಲ್ಲದೆ, ಊಟವಿಲ್ಲದೆ ಕೊರಗಿದರು. ಇವರಿಗೆ 10 ಸಾವಿರ ಪರಿಹಾರ ಹಣ ಮತ್ತು 10 ಕೆಜಿ ಅಕ್ಕಿ ಕೊಡಲು ಒತ್ತಾಯಿಸಿದ್ದೆ. ಆದರೆ ಸರ್ಕಾರದ ಹೃದಯ ಕೆಲಸವನ್ನೇ ಮಾಡಲಿಲ್ಲ. ಎಲ್ಲಾ ಬಿಪಿಎಲ್ ಕಾರ್ಡ್ದಾರರ ಖಾತೆಗಳಿಗೆ ತಲಾ 10 ಸಾವಿರ ರೂಪಾಯಿ ಹಾಕಿದ್ದರೆ ಸರ್ಕಾರಕ್ಕೆ ಹೆಚ್ಚೆಂದರೆ 12 ಸಾವಿರ ಕೋಟಿ ಖರ್ಚಾಗುತ್ತಿತ್ತು. 2 ಲಕ್ಷ 46 ಸಾವಿರ ಕೋಟಿ ಬಜೆಟ್‌ನಲ್ಲಿ ಹಸಿದವರಿಗಾಗಿ, ಬಡವರಿಗಾಗಿ 10 ಸಾವಿರ ರೂಪಾಯಿ ಕೊಡುವುದು ಕಷ್ಟವಿತ್ತಾ ? ಇದು ಎರಡು ವರ್ಷಗಳ ಸಾಧನೆಯಾ ? ವೈಫಲ್ಯವಾ ? ಎಂದು ಪ್ರಶ್ನಿಸಿದರು.

ಆರ್ಥಿಕ ಶಿಸ್ತು ಪಾಲಿಸದೆ ನಿಯಮ ಮೀರಿ ಸಾಲ ಮಾಡಿದ್ದು, ನಿಯಮ ಮೀರಿದ ಸಾಲ ತೀರಿಸುವುದಕ್ಕೇ ಮತ್ತೆ ಸಾಲ ಮಾಡುವ ಸ್ಥಿತಿಗೆ ಸರ್ಕಾರ ಬಂದಿದೆ. ರಾಜ್ಯದ ಇತಿಹಾಸದಲ್ಲೇ ಈ ರೀತಿ ಆಗಿರಲಿಲ್ಲ. 4 ಲಕ್ಷ ಕೋಟಿವರೆಗೂ ಸಾಲ ಮಾಡಿರುವ ರಾಜ್ಯ ಸರ್ಕಾರದ ಬಳಿ ಈ ಸಾಲವನ್ನು ತೀರಿಸುವ ಯೋಜನೆಗಳೇ ಇಲ್ಲ. ಜಿಡಿಪಿಯ ದರದ ಶೇ 25ಕ್ಕಿಂತ ಸಾಲದ ಪ್ರಮಾಣ ಹೆಚ್ಚಾಗಬಾರದು ಎನ್ನುವುದು ನಿಯಮ. ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ನಿಯಮ ಮೀರಿ ಸಾಲ ಮಾಡಿ ಅದರ ಹೊರೆಯನ್ನು ಜನರ ತಲೆ ಮೇಲೆ ಹೊರಿಸಿದ್ದಾರೆ. ಯುಪಿಎ ಸರ್ಕಾರದ ಕೊನೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ದೇಶದ ಸಾಲ 53 ಲಕ್ಷ ಕೋಟಿ ಇತ್ತು. ಈಗ ಅದು 135 ಲಕ್ಷ ಕೋಟಿಗೆ ಏರಿಕೆಯಾಗಿದೆ. ದೇಶ ಸ್ವಾತಂತ್ರ್ಯಗೊಂಡ ಬಳಿಕ 70 ವರ್ಷಗಳಲ್ಲಿ ಮಾಡಿದ ಸಾಲ 53 ಲಕ್ಷ ಕೋಟಿ. ಆದರೆ ನರೇಂದ್ರ ಮೋದಿ ಅವರು ಪ್ರಧಾನಿ ಆದ 6 ವರ್ಷಗಳಲ್ಲೇ 82 ಲಕ್ಷ ಕೋಟಿ ಸಾಲ ಮಾಡಿ ಒಟ್ಟು ದೇಶದ ಸಾಲವನ್ನು 135 ಕೋಟಿಗೆ ತಲುಪಿಸಿದ್ದಾರೆ. ಅಚ್ಛೆ ದಿನ್ ಅಂದರೆ ಇದೇನಾ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಜಿಡಿಪಿ ಶೇ10-11 ರಲ್ಲಿ ಇತ್ತು. ಮೋದಿ ಅವರ ಆಡಳಿತದಲ್ಲಿ ಮೈನಸ್ 7 ಕ್ಕೆ ಕುಸಿದಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದರು. ಆದರೆ 12 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. “ಕೆಲಸ ಕೊಡಿ ಮೋದಿ ಅವರೇ’ ಎಂದು ದೇಶದ ವಿದ್ಯಾವಂತ ನಿರುದ್ಯೋಗಿ ಯುವಕರು/ಯುವತಿಯರು ಕೇಳುತ್ತಿದ್ದಾರೆ. ಆದರೆ, ಮೋದಿ ಅವರು ಪಕೋಡ ಮಾರಿ ಎಂದು ಸಲಹೆ ಕೊಡುತ್ತಿದ್ದಾರೆ.
ಅಡುಗೆ ಎಣ್ಣೆಯ ಬೆಲೆ 80 ರೂಪಾಯಿ ಇದ್ದದ್ದು 200 ರೂಪಾಯಿ ದಾಟಿದೆ. ಹೀಗಾಗಿ ಪಕೋಡ ಕೂಡ ಮಾರಲಾಗದ ಸ್ಥಿತಿ ಬಂದಿದೆ. “ಮೋದಿ-ಮೋದಿ” ಎಂದು ಕೂಗಿದ ದೇಶದ ಯುವಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊಟ್ಟ ಅಚ್ಛೆ ಅಂದರೆ ಇದೆ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 5495 ಕೋಟಿ ಬರಬೇಕಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಪಾಲಿನ 5495 ಸಾವಿರ ಕೋಟಿ ಕೊಡಲು ಸಾಧ್ಯವಿಲ್ಲ ಎಂದು ಮುಲಾಜಿಲ್ಲದೆ ಹೇಳಿದರು. ಇದನ್ನು ರಾಜ್ಯ ಸರ್ಕಾರವಾಗಲೀ, ರಾಜ್ಯದ ಬಿಜೆಪಿ ಸಂಸದರಾಗಲೀ ಪ್ರಶ್ನಿಸಲೇ ಇಲ್ಲ.ಪೆಟ್ರೋಲ್ ಮೇಲಿನ ಎಕ್ದೈಸ್ ಡ್ಯೂಟಿಯನ್ನು 9 ರೂನಿಂದ 33 ರೂಪಾಯಿಗೆ, ಡೀಸೆಲ್ ಮೇಲಿನ ಎಕ್ಸೈಸ್ ಡ್ಯೂಟಿಯನ್ನು 3 ರೂನಿಂದ 32 ರೂಪಾಯಿಗೆ ಏರಿಸಿದ್ದಾರೆ. ಅಂದರೆ ಹತ್ತು ಪಟ್ಟು ಹೆಚ್ಚಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100 ರೂ. ದಾಟುವಂತೆ ಮಾಡಿದ್ದಾರೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೀವಿ ಎಂದು ಹೇಳಿದ್ದಿರಿ. ಇದೇನಾ ನೀವು ಸೃಷ್ಟಿಸಿದ ಸ್ವರ್ಗ ಎಂದು ವ್ಯಂಗ್ಯವಾಡಿದರು.

ರಾಜ್ಯ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2019 ರಲ್ಲಿ 69 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಯ್ತು. ಇದರ ಪರಿಹಾರವನ್ನೇ ಇನ್ನೂ ಕೊಟ್ಟಿಲ್ಲ. ಈ ಬಾರಿ ಕೂಡ ಪ್ರವಾಹದ ಪರಿಸ್ಥಿತಿ ಇದೆ. ನಾನು ಬಾಗಲಕೋಟೆಯ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಬಂದಿದ್ದೀನಿ. ಅಲ್ಲಿನ ಜನ ಬಾಯಿ ತುಂಬಾ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಬೆಳೆ ಹಾನಿಗೆ, ಮನೆಗಳು ಮುಳುಗಿರುವುದಕ್ಕೆ ಸರಿಯಾದ ಪರಿಹಾರ ನೀಡಿಲ್ಲ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ವರ್ಗಾಯಿಸಿಲ್ಲ. ಇದೂ ಎರಡು ವರ್ಷಗಳ ಸಾಧನೆಯಾ? ಎಂದು ವ್ಯಂಗ್ಯವಾಡಿದರು.
ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ವಿದ್ಯಾರ್ಥಿ ವೇತನ ನೀಡುವುದನ್ನು ನಿಲ್ಲಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ 371-ಜೆ ಪ್ರಕಾರ ನಾವಿದ್ದಾಗ ಸಾವಿರ ಕೋಟಿಗೂ ಹೆಚ್ಚು ಕೊಟ್ಟಿದ್ದೆವು. 30 ಸಾವಿರ ಮಂದಿಗೆ ಉದ್ಯೋಗ ಕೊಟ್ಟಿದ್ದೆವು. ಆದರೆ ಈ ಸರ್ಕಾರ “ಕಲ್ಯಾಣ ಕರ್ನಾಟಕ” ಎಂದು ಹೆಸರು ಬದಲಾಯಿಸಿ ಕೈ ಕಟ್ಟಿ ಕುಳಿತಿದ್ದು ಬಿಟ್ಟರೆ ಒಂದು ರುಪಾಯಿಯನ್ನೂ ನೀಡಿಲ್ಲ. ಇದೆಲ್ಲಾ ಎರಡು ವರ್ಷಗಳ ಬಿಜೆಪಿಯ ಸಾಧನೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಹೊಸ ಮುಖ್ಯಮಂತ್ರಿಗಳು ಪೂರ್ಣಾವಧಿ ಸರ್ಕಾರ ನಡೆಸಲಿ ಎಂದು ಆಶಿಸುತ್ತೇನೆ. ಬಸವರಾಜ ಬೊಮ್ಮಾಯಿ ಅವರೇ “ನಾನು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ” ಎಂದು ಹೇಳಿರುವುದರ ಅರ್ಥ ಏನು ಪ್ರಶ್ನಿಸಿದರು.

Join Whatsapp