ಬೆಳಗಾವಿ: ಸಾಂವಿಧಾನಿಕ ಕರ್ತವ್ಯ ಮತ್ತು ಕಾನೂನು-ಕಟ್ಟಳೆಗಳನ್ನು ಮೀರಿ ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ಯಂತ್ರದ ದುರುಪಯೋಗ ಮತ್ತು ಗುತ್ತಿಗೆದಾರರಿಂದ ನಡೆಯುತ್ತಿರುವ ಹಣದ ಸುಲಿಗೆಯನ್ನು ತಡೆಯಲು ತಕ್ಷಣ ವಿಧಾನಸಭೆಯ ಚುನಾವಣಾ ದಿನಾಂಕವನ್ನು ಘೋಷಿಸಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೆ ತರಬೇಕೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶೀಘ್ರದಲ್ಲಿ ಪಕ್ಷದ ಹಿರಿಯ ನಾಯಕರ ಜೊತೆಯಲ್ಲಿ ಚರ್ಚಿಸಿ ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿಪತ್ರ ಸಲ್ಲಿಸುತ್ತೇವೆ ಎಂದರು.
ಒಂದೆಡೆ ಚುನಾವಣಾ ಪ್ರಚಾರಕ್ಕಾಗಿ ಜನರ ತೆರಿಗೆ ಹಣ ಮತ್ತು ಸರ್ಕಾರಿ ಯಂತ್ರದ ದುರುಪಯೋಗ ನಡೆಯುತ್ತಿದೆ. ಕೋಟ್ಯಂತರ ರೂಪಾಯಿ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಸಾಧನೆ ಮತ್ತು ಪೊಳ್ಳು ಭರವಸೆಗಳ ಪುಟಗಟ್ಟಳೆ ಜಾಹೀರಾತು ನೀಡಲಾಗುತ್ತಿದೆ ಇನ್ನೊಂದೆಡೆ ಗುತ್ತಿಗೆದಾರರಿಂದ ಭಾರೀ ಪ್ರಮಾಣದಲ್ಲಿ ಕಮಿಷನ್ ಲೂಟಿ ನಡೆಸುತ್ತಿದೆ ಎಂದರು.
ಕೇಂದ್ರ ಚುನಾವಣಾ ಆಯೋಗ ಈ ಬೆಳವಣಿಗೆಗಳನ್ನು ಗಮನಿಸಿ ಮಧ್ಯೆ ಪ್ರವೇಶಿಸುವುದು ಅದರ ಸಾಂವಿಧಾನಿಕ ಕರ್ತವ್ಯವಾಗಿದೆ. ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಬಿಜೆಪಿ ಇನ್ನೊಂದು ಆಪರೇಷನ್ ಕಮಲಕ್ಕೆ ರೆಡಿಯಾಗುತ್ತಿದೆ. ಇದಕ್ಕಾಗಿ ಬಿಜೆಪಿಯ ಪ್ರತಿಯೊಬ್ಬ ನಾಯಕರು ಸುಲಿಗೆಗೆ ಇಳಿದಿದ್ದಾರೆ. ಪ್ರತಿಯೊಬ್ಬ ಸಚಿವರಿಗೂ ಟಾರ್ಗೆಟ್ ಕೊಡಲಾಗಿದೆಯಂತೆ. ಲಂಚದ ಪರ್ಸೆಟೇಜ್ 40 ದಾಟಿ 50-60ಕ್ಕೆ ಹೋಗಿದೆ. ಪ್ರತಿಯೊಬ್ಬ ಸಚಿವರ ಕಚೇರಿಯೂ ಸುಲಿಗೆಯ ಕೇಂದ್ರಗಳಾಗುತ್ತಿದೆ. ಇದಕ್ಕಾಗಿ ಅಧಿಕಾರಿಗಳನ್ನು ಕೂಡಾ ದುರ್ಬಳಕೆ ಮಾಡಲಾಗುತ್ತಿದೆ ಎಂದರು.
ಇದಕ್ಕೆ ದಾವಣಗೆರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಮಗ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಹಾಕಿಕೊಂಡಿರುವುದೇ ಸಾಕ್ಷಿ. ಗುತ್ತಿಗೆದಾರರ ಸುಲಿಗೆ ಇದೇ ರೀತಿ ಮುಂದುವರಿದರೆ ಇನ್ನೂ ಕೆಲವು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರೆ ಆಶ್ಚರ್ಯ ಇಲ್ಲ. ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಧೂಳೀಪಟವಾಗುವುದು ಖಂಡಿತ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕಳೆದ ಆರು ತಿಂಗಳಿನಲ್ಲಿ ಯಾವೆಲ್ಲ ಟೆಂಡರ್ ನೀಡಿದ್ದಾರೆ ಅವುಗಳನ್ನು ಪುನರ್ ಪರಿಶೀಲನೆಗೊಳಪಡಿಸಲಾಗುವುದು. ಲಂಚೆ ನೀಡಿ ಟೆಂಡರ್ ಪಡೆದಿದ್ದರೆ ಅವುಗಳನ್ನು ರದ್ದು ಪಡಿಸಲಾಗುವುದು ಆದ್ದರಿಂದ ಕಮಿಷನ್ ಆಧಾರದಲ್ಲಿ ಗುತ್ತಿಗೆ ಪಡೆಯುತ್ತಿರುವ ಗುತ್ತಿಗೆದಾರರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದರು.
ರಾಜ್ಯಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡಿದರೆ ಪುರಾವೆ ಎಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮನ್ನು ಮರುಪ್ರಶ್ನೆ ಮಾಡುತ್ತಾರೆ. ಬಿಜೆಪಿ ಸಚಿವ-ಶಾಸಕರ ಲಂಚಾವತಾರಕ್ಕೆ ಬೇಸತ್ತು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದಿದ್ದಾರೆ, ಲಂಚ ನೀಡಿ ಎಲ್ಲವನ್ನೂ ಕಳೆದುಕೊಂಡಿದ್ದ ಒಬ್ಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ, ಈಗ ಲಂಚ ಪಡೆಯುತ್ತಿದ್ದಾಗಲೇ ದಾವಣಗೆರೆ ಶಾಸಕನ ಮಗ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾನೆ. ಇನ್ನೆಷ್ಟು ಪುರಾವೆ ಬೇಕು ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರು ಶಾಸಕರು ಸೇರಿದಂತೆ ಬಿಜೆಪಿಯ ಯಾವ ನಾಯಕನಿಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಉಳಿದಿಲ್ಲ. ಧರ್ಮದ ಹೆಸರಲ್ಲಿ ಹಿಂದು-ಮುಸ್ಲಿಮರನ್ನು ಪರಸ್ಪರ ಕಾದಾಟಕ್ಕೆ ಇಳಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರ ಕೂಡಾ ಜನರಿಗೆ ಅರ್ಥವಾಗಿದೆ. ಈಗ ಉಳಿದಿರುವ ಏಕೈಕ ದಾರಿ ದುಡ್ಡಿನ ರಾಜಕಾರಣ.
ದೇಶದ ಪ್ರಧಾನಿ ಹುದ್ದೆ ಪಕ್ಷ ರಾಜಕಾರಣವನ್ನು ಮೀರಿದ್ದಾಗಿದೆ. ನರೇಂದ್ರ ಮೋದಿಯವರು ಎಲ್ಲ ಕಾನೂನು-ಕಟ್ಟಳೆ, ನೀತಿ-ನಿಯಮಾವಳಿಗಳನ್ನು ಮಾತ್ರವಲ್ಲ ಆ ಹುದ್ದೆಯ ಘನತೆ,ಗಾಂಭೀರ್ಯವನ್ನೂ ಹಾಳುಗೆಡವುತ್ತಿದ್ದಾರೆ. ಇತ್ತೀಚಿನ ರಾಜ್ಯ ಪ್ರವಾಸದಲ್ಲಿ ಅವರ ನಡೆ-ನುಡಿ ಒಬ್ಬ ಬೀದಿಬದಿಯ ಚುನಾವಣಾ ಪ್ರಚಾರಕರಂತೆ ಇದೆಯೇ ಹೊರತು ಪ್ರಧಾನಿ ಹುದ್ದೆಯ ಘನತೆಗೆ ತಕ್ಕದ್ದಾಗಿರಲಿಲ್ಲ. ರಾಜ್ಯದ ಉತ್ತರದ ಭಾಗ ನೆರೆ ನೀರಿನಲ್ಲಿ ಮುಳುಗಿದ್ದಾಗ ಸಂಕಷ್ಟದಲ್ಲಿದ್ದ ಜನರಿಗೆ ಕನಿಷ್ಠ ಸಾಂತ್ವನ ನೀಡಲು ಬರಲು ಪುರುಸೊತ್ತು ಇಲ್ಲದಿದ್ದ ಪ್ರಧಾನಿಯವರು ಮದುವೆಯಾದ ಹೊಸದರಲ್ಲಿ ಮತ್ತೆ ಮತ್ತೆ ಮಾವನ ಮನೆಗೆ ಬರುವ ಅಳಿಯನಂತೆ ಪ್ರತಿವಾರ ಇಲ್ಲಿ ಹಾಜರಾಗುತ್ತಿದ್ದಾರೆ.ಪ್ರಧಾನಿ ಮತ್ತು ಗೃಹಸಚಿವರ ಪ್ರವಾಸ ಕಾರ್ಯಕ್ರಮಕ್ಕಾಗಿ ಸರ್ಕಾರಿ ಖಜಾನೆಯಲ್ಲಿನ ಜನರ ತೆರಿಗೆ ಹಣ ಖರ್ಚಾಗುತ್ತಿದೆ. ಜನರ ತೆರಿಗೆ ಹಣದಿಂದಲೇ ಚುನಾವಣಾ ಪ್ರಚಾರ ನಡೆಸುತ್ತಿರುವುದು ಕಾನೂನು ಉಲ್ಲಂಘನೆ ಮಾತ್ರವಲ್ಲ ಲಜ್ಜೆಗೇಡಿ ನಡವಳಿಕೆ ಎಂದು ಕಿಡಿಕಾರಿದ್ದಾರೆ.