ಉಡುಪಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಪ್ರಶಾಂತ್ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಒತ್ತಾಯಿಸಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಅವರು, ಚೆನ್ನಗಿರಿ ಶಾಸಕ ವಿರೂಪಾಕ್ಷಪ್ಪನ ಬಂಧನ ಆಗಬೇಕು. ಕೈಗಾರಿಕಾ ಸಚಿವ ನಿರಾಣಿಯ ತಲೆದಂಡ ಆಗಬೇಕು. ನೈತಿಕ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ.
ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ವಿಶ್ವವಿಖ್ಯಾತಿಯನ್ನು ಪಡೆದಿದೆ. ಬೊಮ್ಮಾಯಿ ಮೂಗಿನ ಕೆಳಗೆ ನಡೆದ ಭ್ರಷ್ಟಾಚಾರ ಬಯಲಾಗಿದೆ. ಭ್ರಷ್ಟಾಚಾರದ ಹಣದಲ್ಲಿ ಯಾರಿಗೆಲ್ಲ ಪಾಲು ಇದೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು. ಒಳಚರಂಡಿ ಮತ್ತು ನೀರು ಸರಬರಾಜು ಬೋರ್ಡ್ ನಲ್ಲಿ ಎಷ್ಟು ಸಾವಿರ ಕೋಟಿ ಈವರೆಗೆ ಲೂಟಿ ಮಾಡಿದ್ದೀರಿ? ಒಂದು ವಾರದಲ್ಲಿ ರಾಜ್ಯದ ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ತನಿಖೆ ನಡೆಸಬೇಕು. ಭ್ರಷ್ಟಾಚಾರ ಮತ್ತು ಲೂಟಿಯ ಸಂಪೂರ್ಣ ದಾಖಲೆಯನ್ನು ತೆರೆದಿಡಬೇಕು ಎಂದು ಆಗ್ರಹಿಸಿದರು.