ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಫೆಬ್ರವರಿ 23 ರ ಮುಂಜಾನೆಯವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.
ಶಿವಮೊಗ್ಗ ನಗರದಾದ್ಯಂತ ಪೊಲೀಸರ ಸರ್ಪಗಾವಲು ಸುತ್ತುವರಿದಿದೆ. ತೀರ್ಥಹಳ್ಳಿ ರಸ್ತೆಯ ಸೀಗೆಹಟ್ಟಿಯಲ್ಲಿರುವ
ಹರ್ಷನ ಮನೆ ಸುತ್ತಮುತ್ತ ಆರ್ಎಎಫ್ ಸಿಬ್ಬಂದಿ ಕಾವಲು ನಿಯೋಜನೆ ಮಾಡಲಾಗಿದೆ.
ಯಾವುದೇ ಸಂಘಟನೆಯ ಪಾತ್ರವಿಲ್ಲ: ಗೃಹ ಸಚಿವ
ಭಜರಂಗದಳದ ಕಾರ್ಯಕರ್ತನ ಹತ್ಯೆಯ ಹಿಂದೆ ಯಾವುದೇ ಸಂಘಟನೆಯ ಪಾತ್ರ ಇರುವ ಬಗ್ಗೆ ಮಾಹಿತಿಯಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರ 3 ತಂಡ ರಚನೆ ಮಾಡಲಾಗಿದೆ. ಸಿಪಿಐಗಳಾದ ಅಭಿಯಪ್ರಕಾಶ್, ಗುರುರಾಜ್, ಸತೀಶ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.
ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ
ನಗರದ ಶಾಲಾ- ಕಾಲೇಜುಗಳಿಗೆ ಫೆಬ್ರವರಿ 22, ಮಂಗಳವಾರ ರಜೆ ಘೋಷಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.