ಕಾಂಗ್ರೆಸ್ ವಿರುದ್ಧ ಶಿವಸೇನೆ ವಾಗ್ದಾಳಿ: ಮೈತ್ರಿಗೆ ಅಡ್ಡಿಯಾಗುತ್ತಿರುವ ಗೋವಾ ಬೆಳವಣಿಗೆ

Prasthutha|

ಪಣಜಿ: ಮಹಾರಾಷ್ಟ್ರದ ಬಳಿಕ ಗೋವಾದಲ್ಲಿ ಕಾಂಗ್ರೆಸ್ ಮತ್ತು ಶಿವಸೇನೆ ಒಟ್ಟಾಗಿ ಚುನಾವಣೆ ಎದುರಿಸಲಿವೆ ಎಂದು ಅಂದಾಜಿಸಲಾಗಿದ್ದರೆ ನಡೆಯುತ್ತಿರುವುದು ಬೇರೆಯಾಗಿದೆ. ಶಿವಸೇನೆ ನಾಯಕ ಸಂಜಯ್ ರಾವತ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದು, “ಗೋವಾದ ರಾಜಕೀಯ ಪರಿಸ್ಥಿತಿ ಹೇಗಿದೆ ಎಂದರೆ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸಿದರೆ ಶಾಸಕರ ಸಂಖ್ಯೆ ಒಂದಂಕಿ ದಾಟುವುದಿಲ್ಲ” ಎಂದು ಎಂದು ಹೇಳಿದ್ದಾರೆ.

- Advertisement -

“ಗೋವಾ ಕಾಂಗ್ರೆಸ್ನಲ್ಲಿ ಮೂವರು ಶಾಸಕರು ಉಳಿದಿದ್ದಾರೆ. ಪಕ್ಷ ಈಗಾಗಲೇ ಮುಖಭಂಗ ಅನುಭವಿಸಿದೆ. ಕಷ್ಟದ ಪರಿಸ್ಥಿತಿಯಲ್ಲಿ ನಾವು ಮತ್ತು ಎನ್ಸಿಪಿ ಪಕ್ಷಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದರೆ ಕಾಂಗ್ರೆಸ್ ಬೇರೆಯದೇ ಆದ ಚಿಂತನೆ ನಡೆಸುತ್ತಿದೆ ” ಎಂದು ಸಂಜಯ್ ರಾವತ್ ಹೇಳಿದರು.

“40 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 30ರಲ್ಲಿ ಕಣಕ್ಕಿಳಿಯಲಿ. ಉಳಿದ ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಡಲಿ ಎಂಬ ಆಯ್ಕೆಯನ್ನು ಕಾಂಗ್ರೆಸಿಗೆ ನೀಡಲಾಗಿದೆ. ಒಂದು ವೇಳೆ ಅದು ಏಕಾಂಗಿಯಾಗಿ ಚುನಾವಣೆ ಎದುರಿಸಿದರೆ ಒಂದಂಕಿ ಶಾಸಕರು ಆಯ್ಕೆಯಾಗಲಿದ್ದಾರೆ” ಎಂದು ಸಂಜಯ್ ರಾವತ್ ತಿಳಿಸಿದರು.

- Advertisement -

ಸಂಜಯ್ ರಾವತ್ ಗೋವಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ದಿನೇಶ್ ಗುಂಡೂರಾವ್, ಸಿಎಲ್ಪಿ ನಾಯಕ ದಿಗಂಬರ್ ಕಾಮತ್, ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡನ್ಕರ್ ಜೊತೆ ಸಭೆ ನಡೆಸಿದ್ದಾರೆ. ಕಾಂಗ್ರೆಸ್, ಶಿವಸೇನೆ, ಎನ್ಸಿಪಿ, ಗೋವಾ ಫಾರ್ವರ್ಡ್ ಪಕ್ಷದ ಮೈತ್ರಿಕೂಟ ರಚನೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸದ 10 ವಿಧಾನಸಭಾ ಕ್ಷೇತ್ರಗಳನ್ನು ಮೈತ್ರಿಕೂಟಕ್ಕೆ ಬಿಟ್ಟುಕೊಡಬೇಕು ಎಂಬ ಆಯ್ಕೆಯನ್ನು ಸಂಜಯ್ ರಾವತ್ ಮುಂದಿಟ್ಟಿದ್ದಾರೆ. ಅಲ್ಲದೇ ಈ ಮೈತ್ರಿಕೂಟ ರಾಜ್ಯ ರಾಜಕೀಯದಲ್ಲಿ ಹೊಸ ದೃಷ್ಟಿಕೋನಕ್ಕೆ ಸಾಕ್ಷಿಯಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಿವರಣೆ ನೀಡಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಗೋವಾ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.
2017ರ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳಲ್ಲಿ ಗೆದ್ದು ಗೋವಾದಲ್ಲಿ ಬಹದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 13 ಸ್ಥಾನಗಳಲ್ಲಿ ಗೆದ್ದ ಬಿಜೆಪಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು.

ಈ ಬಾರಿಯ ಚುನಾವಣೆ ಕಾಂಗ್ರೆಸ್ಗೆ ದೊಡ್ಡ ಸವಾಲಾಗಿದೆ. ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಶಾಸಕರು ಪಕ್ಷವನ್ನು ತೊರೆದಿದ್ದಾರೆ. ಕಾಂಗ್ರೆಸ್ ಮತ್ತು ಶಿವಸೇನೆ ಗೋವಾದಲ್ಲಿ ಒಟ್ಟಾಗಿ ಸಾಗಲು ಮೊದಲ ಹೆಜ್ಜೆಯಲ್ಲಿಯೇ ಅಡ್ಡಿ ಉಂಟಾಗಿದೆ. ಶಿವಸೇನೆ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಸಾಲು ಸಾಲು ನಾಯಕರು ಪಕ್ಷ ಬಿಡುತ್ತಿದ್ದು, ಗೋವಾ ಕಾಂಗ್ರೆಸ್ಗೆ ಹೊಸ ಸವಾಲು ಎದುರಾಗಿದೆ

Join Whatsapp