ತಪ್ಪಿನ ಅರಿವಾಗಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಕೈಬಿಟ್ಟಿರುವುದು ಸಂತೋಷ: ಅಶ್ವತ್ಥನಾರಾಯಣ

Prasthutha|

ಬೆಂಗಳೂರು: ತಪ್ಪಿನ ಅರಿವಾಗಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಕೈಬಿಟ್ಟಿರುವುದು ಸಂತೋಷ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

- Advertisement -

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಕೈಬಿಟ್ಟಿರುವುದು ತಮ್ಮ ತಪ್ಪಿನ ಅರಿವಾಗಿ, ಅವರು ಸೂಕ್ತವಾದ ನಿರ್ಣಯ ತೆಗೆದುಕೊಂಡಿದ್ದಾರೆ ಎಂದರು.

ಮೇಕೆದಾಟು ಕುಡಿಯುವ ನೀರು ಎಲ್ಲರಿಗೂ ಬೇಕಾಗಿರುವುದು. ರಾಜ್ಯದ ನೆಲ, ಜಲ ಬಂದಾಗ ಎಲ್ಲರೂ ಒಟ್ಟಾಗಿ ಸೇರುತ್ತೇವೆ. ಆದರೆ ರಾಜಕೀಯ ಲಾಭಕ್ಕಾಗಿ ಮಾಡಿದ ಈ ಪಾದಾಯಾತ್ರೆಗೆ ಸೂಕ್ತ ಸಮಯ, ಸಂದರ್ಭ ಇರಲಿಲ್ಲ. ಮೇಕೆದಾಟು ಯೋಜನೆ ಯಾರು ಬೇಡ ಎಂದು ಹೇಳಿರಲಿಲ್ಲ, ವಿರೋಧ ಮಾಡಿರಲಿಲ್ಲ. ನಮಗೂ ಯೋಜನೆ ಆಗುವುದು ಮುಖ್ಯ. ಎಲ್ಲರೂ ಬದ್ಧರಾಗಿದ್ದಾರೆ ಎಂದು ಹೇಳಿದರು.

- Advertisement -

ಇದು ಪಾದಯಾತ್ರೆಗೆ ಸೂಕ್ತವಾದ ಸಮಯ ಅಲ್ಲ. ಈ ಪಾದಯಾತ್ರೆ ಮಾಡುವ ಅಗತ್ಯವಿರಲಿಲ್ಲ. ಹೈಕೋರ್ಟ್ ಈ ವಿಚಾರವನ್ನು ಕೈಗೆ ಎತ್ತಿಕೊಂಡಿತ್ತು. ಕೋರ್ಟ್ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಬಳಿ ಸ್ಪಷ್ಟನೆ ಕೇಳಿತ್ತು‌‌. ಪಾದಯಾತ್ರೆಗೆ ನಾವು ಯಾವುದೇ ಅನುಮತಿ  ಕೊಟ್ಟಿರಲಿಲ್ಲ. ನೀವು ಏನು ಮಾಡುತ್ತಿರೋ ಮಾಡಿ ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ರು. ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ ಎಂದರು.

ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಜಿಲ್ಲೆಗಳಲ್ಲೂ ಕೋವಿಡ್ ಟೆಸ್ಟ್ ಮಾಡುತ್ತೇವೆ ಎಂದ ಸಚಿವರು,  ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಹಲವಾರು ಕಾಂಗ್ರೆಸ್ ನಾಯಕರಿಗೆ ಕೋವಿಡ್ ಬಂದಿದೆ. ಅದನ್ನು ಆ ನಾಯಕರೇ ಹೇಳುತ್ತಿದ್ದಾರೆ. ಕೊವಿಡ್ ವೇಗವಾಗಿ ಹರಡುತ್ತಿದೆ. ಅದನ್ನು ನಿಯಂತ್ರಣ ಮಾಡುವ ಕೆಲಸ ಮಾಡುತ್ತೇವೆ ಎಂದರು.

ಮೇಕೆದಾಟು ಬಗ್ಗೆ ಯಾವುದೇ ಕಾಳಜಿ ಇಲ್ಲ. ನಾನು ನಾಯಕನಾಗಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪೈಪೋಟಿ ಕೊಡುವ ಕಲ್ಪನೆ ಇದೆ ಅಷ್ಟೇ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಗೆ ಟಾಂಗ್ ನೀಡಿದರು.

Join Whatsapp