ಮಲಪ್ಪುರಂ: ಕೇರಳದ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಕನ್ನಡ ಭಾಷಣ ವಿಭಾಗದಲ್ಲಿ ಮಲಪ್ಪುರಂ ಜಿಲ್ಲೆಯ 10ನೇ ತರಗತಿಯ ವಿದ್ಯಾರ್ಥಿನಿ ಪ್ರಥಮ ಸ್ಥಾನಗಳಿಸಿದ್ದಾಳೆ.
ಮೂಲತಃ ಶಿವಮೊಗ್ಗದ ಅಫೀಫಾ ವಿಜೇತ ವಿದ್ಯಾರ್ಥಿನಿ. 2021ರ ಮಾರ್ಚ್ ನಲ್ಲಿ ಭುಗಿಲೆದ್ದ ಹಿಜಾಬ್ ವಿವಾದದಿಂದಾಗಿ ಎಸ್ಎಸ್ಎಲ್ಸಿ ಯಲ್ಲಿ ಕಲಿಯುತ್ತಿದ್ದ ಅಫೀಫಾ ಶಾಲೆಬಿಟ್ಟು ಮನೆ ಸೇರುವಂತಾಯಿತು.ತನ್ನ ಮಾತೃಭಾಷೆ ಮಲಯಾಳಂ ಆಗಿದ್ದರಿಂದ ಕೇರಳದಲ್ಲಿ ಓದಲು ನಿರ್ಧರಿಸಿದ ಅಫೀಫಾ ಅಜ್ಜನ ತವರೂರಾದ ಮಲಪ್ಪುರಂನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾಳೆ.
ವೈದ್ಯೆಯಾಗಬೇಕೆಂಬ ಕನಸು ಹೊತ್ತಿರುವ ಅಫೀಫಾ ಮಲಪ್ಪುರಂ ಕರುವಾರಕ್ಕುಂಡ್ DNHSS ಶಾಲೆಯಲ್ಲಿ 2022-2023ನೇ ಸಾಲಿನಲ್ಲಿ 10ನೇ ತರಗತಿಗೆ ಮರುಪ್ರವೇಶ ಪಡೆದು ಹೆಣ್ಣುಮಕ್ಕಳ ಹಾಸ್ಟೆಲ್ ನಲ್ಲಿದ್ದುಕೊಂಡು ಅಧ್ಯಯನ ನಡೆಸುತ್ತಿದ್ದಾಳೆ.
ಅಫೀಫಾ ಇತ್ತೀಚೆಗೆ ನಡೆದ ಕೇರಳದ ಶಾಲಾ ಕಲೋತ್ಸವಂನಲ್ಲಿ ‘ಪ್ರಜಾಪ್ರಭುತ್ವದಲ್ಲಿ ಮತದಾರರ ಹಕ್ಕು’ ಎಂಬ ವಿಷಯದ ಕುರಿತು ಕನ್ನಡದಲ್ಲಿ ಭಾಷಣ ಮಾಡಿ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಫೀಫಾ “ಹಿಜಾಬ್ ಧರಿಸುವುದೆಂದರೆ ನನಗಿಷ್ಟ. ಆದರೆ, ಹಿಜಾಬ್ ಧರಿಸಬಾರದು ಎಂಬ ನೀತಿಯಿಂದಾಗಿ ನಾನು ಶಾಲೆಯಿಂದ ಹೊರಗುಳಿಯಬೇಕಾಯಿತು. ನಾನು ಮಾತ್ರವಲ್ಲ ನನ್ನಂತೆ ಹಲವಾರು ಗೆಳೆತಿಯರು ಶಾಲೆಯನ್ನು ಮೊಟಕುಗೊಳಿಸಿ ಮನೆಯಲ್ಲಿದ್ದಾರೆ. ಅಪ್ಪ, ಅಮ್ಮ, ಸ್ನೇಹಿತೆಯರು ಎಲ್ಲರನ್ನೂ ಬಿಟ್ಟು ಇಲ್ಲಿರುವುದಕ್ಕೆ ಬೇಸರವಾಗುತ್ತಿದೆ. ಆದರೆ, ನಾನು ವೈದ್ಯಳಾಗಲೇಬೇಕು ಹಾಗಾಗಿ ಎಲ್ಲ ಬೇಸರಗಳಾಚೆಗೂ ಚೆನ್ನಾಗಿ ಓದಿ, ವೈದ್ಯಳಾಗೇ ಆಗುತ್ತೇನೆ” ಎಂದು ಹೇಳಿದ್ದಾಳೆ.
ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಅಫೀಫಾ, ಮಲಯಾಳಂ ಓದಲು ಬರೆಯಲು ಕಲಿಯುತ್ತಿದ್ದಾಳೆ ಎಂದು ಆಕೆಯ ಶಿಕ್ಷಕರು ತಿಳಿಸಿದ್ದಾರೆ.