ಹಾಸನ SDPI ಜಿಲ್ಲಾ ಸಮಿತಿಯ ಚುನಾವಣಾ ಪೂರ್ವಭಾವಿ ಸಭೆ: ಹಾಸನ ನಗರ, ಸಕಲೇಶಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧಾರ

Prasthutha|

ಹಾಸನ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಸನ ಜಿಲ್ಲಾ ಸಮಿತಿ ಚುನಾವಣಾ ಪೂರ್ವ ಭಾವಿ ಸಭೆಯು ಜರುಗಿತು.

- Advertisement -


ಸಭೆಯಲ್ಲಿ ಜಿಲ್ಲಾ ನಾಯಕರೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ, ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಹಾಸನದಿಂದ ಎಸ್’ಡಿಪಿಐ ಸ್ಪರ್ಧಿಸುವುದು ಖಚಿತ. ಆದುದರಿಂದ ಪಕ್ಷದ ಕಾರ್ಯಕರ್ತರು, ವಾರ್ಡ್ ಕಮಿಟಿ ಸದಸ್ಯರನ್ನು ಭೇಟಿಯಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಬೇಕೆಂದು ಕಿವಿಮಾತು ಹೇಳಿದರು.


ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ನಡೆಸುವುದರ ಮೂಲಕ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದರು.
ಸಭೆಯಲ್ಲಿ ನೂತನವಾಗಿ ಹಾಸನ ವಿಧಾನಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿಗಳಾಗಿ ಆಯ್ಕೆಯಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್ ಮಾತನಾಡಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೂತ್ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಕಾರ್ಯಕರ್ತರನ್ನು ಹೊಂದಿರುವ ಕೇಡರ್ ಬೇಸ್ ಪಕ್ಷವಾಗಿರುವುದರಿಂದ ನಮ್ಮ ಪಕ್ಷಕ್ಕೆ ರಾಜಕೀಯ ಭವಿಷ್ಯ ಇದೆ. ಬಿ. ಆರ್. ಅಂಬೇಡ್ಕರ್ ಹೇಳಿರುವಂತೆ ಪೊಲಿಟಿಕಲ್ ಪವರ್ ಇಸ್ ಮಾಸ್ಟರ್ ಕೀ. ದೇಶದಲ್ಲಿ ರಾಜಕೀಯವಾಗಿ ನಾವು ಬೆಳೆಯದೆ ಇದ್ದರೆ ನಮ್ಮ ಹಕ್ಕುಗಳ ಬಗ್ಗೆ ಮಾತನಾಡಲು ನಮಗೆ ಶಕ್ತಿ ಇಲ್ಲದಂತಾಗುತ್ತದೆ. ಆದುದರಿಂದ ಜನರನ್ನು ರಾಜಕೀಯವಾಗಿ ಪ್ರಬುದ್ಧರನ್ನಾಗಿಸಬೇಕು. ಅದಕ್ಕಾಗಿ ಪಕ್ಷದ ನಾಯಕರು ಕೆಲಸ ಮಾಡಬೇಕು ಎಂದು ಹೇಳಿದರು.

- Advertisement -


ಸಭೆಯಲ್ಲಿ 2023ರ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಚರ್ಚೆ ನಡೆಸಿ ಐವರು ಅಭ್ಯರ್ಥಿಗಳ ಹೆಸರುಗಳನ್ನು ಅನುಮೋದನೆಗಾಗಿ ರಾಜ್ಯ ಸಮಿತಿಗೆ ಕಳುಹಿಸಲಾಯಿತು.


ಎಸ್’ಡಿಪಿಐ ರಾಷ್ಟ್ರೀಯ ಅಧ್ಯಕ್ಷರು ಜನವರಿ 7ನೇ ತಾರೀಖಿನಂದು ಬೆಂಗಳೂರಿನಲ್ಲಿ ಘೋಷಣೆ ಮಾಡಿದ ಪ್ರಥಮ ಪಟ್ಟಿಯಲ್ಲಿ ಜಿಲ್ಲೆಯ ಹಾಸನ ನಗರ ಮತ್ತು ಸಕಲೇಶಪುರ ಮೀಸಲು ಕ್ಷೇತ್ರದ ಹೆಸರುಗಳಿದ್ದು ಆದಷ್ಟು ಬೇಗ ಈ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಲೀಂ ಅಹಮದ್, ಜಿಲ್ಲಾಧ್ಯಕ್ಷ ಸಿದ್ದಿಕ್ ಆನೆ ಮಹಲ್, ಕಾರ್ಯದರ್ಶಿ ಸಲ್ಮಾನ್, ಖಜಾಂಚಿ ಶಜ್ಜಿಲ್ ಅಹಮದ್, ಹಾಸನ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸರ್ದಾರ್ ಪಾಷಾ , ಜಿಲ್ಲಾ ಸಮಿತಿ ಸದಸ್ಯರಾದ ಇರ್ಫಾನ್, ಫೈರೂಸ್ ಪಾಷಾ, ಅಮಾನುಲ್ಲಾ, ಅಶ್ವಖುಲ್ಲಾ ಉಪಸ್ಥಿತರಿದ್ದರು.

Join Whatsapp