ಗುರುಕುಲ ಆಶ್ರಮದಲ್ಲಿ ಮಸಾಜ್ ಹೆಸರಿನಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ: ಶಿಕ್ಷಕ ಬಂಧನ

Prasthutha|

ಛತ್ತೀಸ್’ಗಡ: ಛತ್ತೀಸ್’ಗಡದ ಮಹಾಸಮುಂಡ್’ನಲ್ಲಿರುವ ಆರ್ಷ್ ಜ್ಯೋತಿ ಗುರುಕುಲ ಆಶ್ರಮದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಶಿಕ್ಷಕ ನಿರಂತರ ಕಿರುಕುಳ ನೀಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

ವಿದ್ಯಾರ್ಥಿಗಳನ್ನು ಕರೆಸಿಕೊಂಡು ಶಿಕ್ಷಕ ಅಸಭ್ಯ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ. 8ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿದು ಬಂದಿದ್ದು, ವಿಷಯ ಬೆಳಕಿಗೆ ಬಂದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದನು. ಸದ್ಯ ಆತನನ್ನು ಖಲ್ಲಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಕೊಸರಂಗಿ ಗ್ರಾಮದಲ್ಲಿ ಆರ್ಷಜ್ಯೋತಿ ಗುರುಕುಲ ಆಶ್ರಮವಿದೆ. ಆಚಾರ್ಯ ಕೋಮಲ್ ಕುಮಾರ್ ವೈಷ್ಣವ್ ಎಂಬಾತನನ್ನು ಇಲ್ಲಿ ಮೇಲ್ವಿಚಾರಣೆಗಾಗಿ ನೇಮಿಸಲಾಗಿದ್ದು, ಆತ ಆಶ್ರಮದ ಅಧೀಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದನು.

- Advertisement -

ಆತ ತನ್ನ ಕೊಠಡಿಯಲ್ಲಿ ಮಸಾಜ್ ಮಾಡಿಸಿಕೊಳ್ಳಲು ಮಕ್ಕಳನ್ನು ಕರೆಯಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ. ಈ ವಿಚಾರವನ್ನು ಯಾರಲ್ಲೂ ಹೇಳದಂತೆ ಮಕ್ಕಳನ್ನು ಬೆದರಿಸಿ ಹಲ್ಲೆ ನಡೆಸುತ್ತಿದ್ದನು. ಮಕ್ಕಳು ಮನೆಯವರೊಂದಿಗೆ ಮಾತನಾಡಿದಾಗಲೆಲ್ಲ ಆರೋಪಿ ಎದುರೇ ಕುಳಿತುಕೊಳ್ಳುತ್ತಿದ್ದ ಎಂದು ಹೇಳಲಾಗಿದೆ.

ಈ ನಡುವೆ ಕೆಲವು ಮಕ್ಕಳ ಕುಟುಂಬಸ್ಥರು ಆಶ್ರಮಕ್ಕೆ ಬಂದಿದ್ದು, ಈ ವೇಳೆ ಮಕ್ಕಳು ಪೋಷಕರಲ್ಲಿ ಮಾತನಾಡಿ ನಡೆದ ಪ್ರಸಂಗವನ್ನು ತಿಳಿಸಿದ್ದರು. ಇದರಿಂದ ಎಚ್ಚೆತ್ತ ಪೋಷಕರು ತಕ್ಷಣ ಪೊಲೀಸ್ ಇಲಾಖೆ ಮತ್ತು ಚೈಡ್’ಲೈನ್ಸ್’ಗೆ ಮಾಹಿತಿ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾಧಿಕಾರಿ ಆಶ್ರಮ ತಲುಪಿದ್ದಾರೆ. ಆದರೆ ಅಷ್ಟರಲ್ಲಿ ಆರೋಪಿ ಆಚಾರ್ಯ ಕೋಮಲ್ ಕುಮಾರ್ ವೈಷ್ಣವ್ ತಲೆಮರೆಸಿಕೊಂಡಿದ್ದನು. ಸದ್ಯ ಸೈಬರ್ ಸೆಲ್ ನೆರವಿನಿಂದ ಆರೋಪಿಯನ್ನು ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.

Join Whatsapp