ಮಂಗಳೂರು: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನ್ಯಾಯವಾದಿ ರಾಜೇಶ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಮಂಗಳೂರಿನ ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕರಾಗಿದ್ದ ಕೆ.ಎಸ್.ಎನ್ ರಾಜೇಶ್ ಸೋಮವಾರ, ಡಿ. 20 ರಂದು 3 ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ರಾಜೇಶ್ ಪತ್ತೆಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿ ದೇಶ ಬಿಟ್ಟು ಹೋಗದಂತೆಯೂ ಎಚ್ಚರ ವಹಿಸಲಾಗಿತ್ತು.
ವಿದ್ಯಾರ್ಥಿನಿ ಅ.18 ರಂದು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಇದುವರೆಗೂ ಬಂಧಿಸಿರಲಿಲ್ಲ. ಎರಡು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಈತನಿಗೆ ನಿರೀಕ್ಷಣಾ ಜಾಮೀನು ಕೂಡ ದೊರೆತಿರಲಿಲ್ಲ.
ವಿದ್ಯಾರ್ಥಿನಿ ಕಳೆದ ಆ.8 ರಂದು ಕೆ.ಎಸ್.ಎನ್ ರಾಜೇಶ್ ಅವರ ಕರಂಗಲ್ಪಾಡಿಯ ಕಚೇರಿಯಲ್ಲಿ ತರಬೇತಿಗಾಗಿ ಸೇರಿದ್ದರು. ಆಗ ರಾಜೇಶ್ ಯುವತಿಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಒತ್ತಾಯಿಸುತ್ತಿದ್ದ. ಸೆ.25 ರಂದು ಚೇಂಬರ್ ಒಳಗೆ ಕರೆದು ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.