ರಾಜ್ಯದಲ್ಲೂ ಸಮಾನ ನಾಗರಿಕ ಸಂಹಿತೆ ಅನುಷ್ಠಾನಕ್ಕೆ ಗಂಭೀರ ಚಿಂತನೆ: CM ಬೊಮ್ಮಾಯಿ

Prasthutha|

ಬೆಂಗಳೂರು: ರಾಜ್ಯದಲ್ಲೂ ಸಮಾನ ನಾಗರಿಕ ಸಂಹಿತೆ (ಕಾಮನ್ ಸಿವಿಲ್ ಕೋಡ್) ಜಾರಿ ಕುರಿತು ಸರ್ಕಾರ ಗಂಭೀರ ಚಿಂತನೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -

ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಪ್ರಶಿಕ್ಷಣ ವರ್ಗದಲ್ಲಿ ‘ರಾಜ್ಯದ ಅಭಿವೃದ್ಧಿ ಮಾರ್ಗದಲ್ಲಿ ಬಿಜೆಪಿ ಸರಕಾರದ ಹೆಜ್ಜೆಗಳು’ ಕುರಿತು ಮಾತನಾಡಿದ ಅವರು, ಸಮಾನ ನಾಗರಿಕ ಸಂಹಿತೆ ಜಾರಿ ಸಾಧಕ – ಬಾಧಿಕಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ನಾನು ಆಡಳಿತ ವಹಿಸಿಕೊಂಡ ಬಳಿಕ ಗುರಿ ಮೀರಿ ಆದಾಯ ಸಂಗ್ರಹಿಸಲಾಗಿದೆ. ಇದು ಆರ್ಥಿಕ ಸದೃಢತೆಯ ಸಂಕೇತ. ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಡಲಾಗಿದೆ. ಭದ್ರಾ ಮೇಲ್ದಂಡೆ, ಕಳಸಾ ಬಂಡೂರಿ, ಮೇಕೆದಾಟು, ಎತ್ತಿನಹೊಳೆ ಯೋಜನೆಗೆ ಹಣ ನೀಡಲಾಗಿದೆ ಎಂದರು.

- Advertisement -

ಕೈಗಾರಿಕೆಯಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಲಾಗಿದೆ. ಗ್ಲೋಬಲ್ ಇನ್ವೆಸ್ಟರ್ ಮೀಟ್ ಮೂಲಕ 9 ಲಕ್ಷ ಕೋಟಿ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಟೆಕ್ ಸಮಿಟ್ ಮಾಡಲಾಗಿದೆ. ರಾಜ್ಯವನ್ನು ಎಲ್ಲ ದೃಷ್ಟಿಯಿಂದ ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಅಭಿವೃದ್ಧಿ, 8 ಮೀನುಗಾರಿಕಾ ಬಂದರು ಅಭಿವೃದ್ಧಿ ನಡೆದಿದೆ. ಶಿವಮೊಗ್ಗ, ಹಾಸನ, ವಿಜಯಪುರ ವಿಮಾನನಿಲ್ದಾಣಗಳ ಉದ್ಘಾಟನೆ ನಡೆಸುತ್ತಿದ್ದು, ಮುಂದೆ ಕಾರವಾರ ಮತ್ತು ರಾಯಚೂರು ವಿಮಾನನಿಲ್ದಾಣಗಳ ಕಾಮಗಾರಿ ನಡೆಸಿ ಉದ್ಘಾಟನೆ ನೆರವೇರಿಸಲಿದ್ದೇವೆ ಎಂದು ವಿವರ ನೀಡಿದರು.

ದಾಖಲೆ ಪ್ರಮಾಣದ ಶಾಲಾ ಕೊಠಡಿ ನಿರ್ಮಾಣ, 15 ಸಾವಿರ ಶಿಕ್ಷಕರ ನೇಮಕಾತಿ, ಉನ್ನತ ಶಿಕ್ಷಣದಲ್ಲೂ ಸಾಧನೆ ಮಾಡಿದ್ದೇವೆ. 100 ಪಿಎಚ್ಸಿ ಸೆಂಟರ್ಗಳ ಉನ್ನತೀಕರಣ, ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ಅನುದಾನ ನೀಡುತ್ತಿದ್ದೇವೆ ಎಂದು ತಿಳಿಸಿದರು. ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದರು.

30 ಜಿಲ್ಲೆಗಳಲ್ಲಿ ಗೋಶಾಲೆ ತೆರೆಯಲಾಗಿದೆ. ಜನರ ಪಾಲ್ಗೊಳ್ಳುವಿಕೆ ಬೇಕಾಗಿದೆ. ಮತಾಂತರ ನಿಷೇಧ ಕಾಯ್ದೆಗೂ ಆಕ್ಷೇಪ ಮಾಡಿದ್ದರು. ತಪ್ಪು ವ್ಯಾಖ್ಯಾನ ಮಾಡಿದ್ದರು. ದತ್ತ ಪೀಠ ನಮ್ಮ ನಂಬಿಕೆ. ಹಲವಾರು ವಿಚಾರದಲ್ಲಿ ಗಟ್ಟಿ ನಿಲುವು ನಮ್ಮದು ಎಂದರು.

 ಬಿಜೆಪಿ ಬಗ್ಗೆ ಸಂವಿಧಾನ ಬದಲಿಸಲು ಹೊರಟವರು ಎಂಬ ಅಪಪ್ರಚಾರ ಮಾಡಲಾಗಿತ್ತು. ಸಂವಿಧಾನವನ್ನು ಗಟ್ಟಿಗೊಳಿಸಿ, ಸಂವಿಧಾನದ ಆಶಯದಂತೆ ಆಡಳಿತ ಕೊಟ್ಟವರು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಎಂದು ತಿಳಿಸಿದರು. ನಾಳೆ ಸಂವಿಧಾನ ದಿನವನ್ನು ಅತ್ಯಂತ ಅಭಿಮಾನದಿಂದ ಆಚರಿಸಲಿದ್ದೇವೆ ಎಂದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಪ್ರಜಾಪ್ರಭುತ್ವ ಉಳಿದಿದೆ. ಎಲ್ಲರಿಗೂ ಸಮಾನ ಅವಕಾಶ, ಸ್ವಾಭಿಮಾನದ ಬದುಕು ಸಂವಿಧಾನದ ಆಶಯವಾಗಿದ್ದು, ಅದನ್ನು ಈಡೇರಿಸಲು ಬಿಜೆಪಿ ಮತ್ತು ಬಿಜೆಪಿ ಸರಕಾರಗಳು ಬದ್ಧತೆ ಪ್ರದರ್ಶಿಸಿವೆ ಎಂದು ತಿಳಿಸಿದರು.

ಡಾ. ಅಂಬೇಡ್ಕರರ ಬಗ್ಗೆ ಅವರು ಜೀವಂತವಿದ್ದಾಗ ಕೆಟ್ಟದಾಗಿ ನಡೆದುಕೊಂಡ ಕಾಂಗ್ರೆಸ್ಸಿಗರು ಈಗ ಮೊಸಳೆ ಕಣ್ಣೀರು ಹಾಕುತ್ತಾರೆ ಎಂದು ಟೀಕಿಸಿದರು. ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಿದ್ದು, ಅವರು ತೀರಿಹೋದಾಗ ದಿಲ್ಲಿಯಲ್ಲಿ ಅವರ ಸಮಾಧಿ ಮಾಡಲು ಜಾಗ ಕೊಡದಿರುವುದು ಸೇರಿ ಅಂಬೇಡ್ಕರರಿಗೆ ಅವಮಾನ ಮಾಡಿದ ಪಕ್ಷ ಕಾಂಗ್ರೆಸ್ ಎಂದರು.

ಸ್ವಾತಂತ್ರ್ಯ ಹೋರಾಟದ ಲಾಭವನ್ನು ಪಡೆದುಕೊಂಡ ಪಕ್ಷ ಕಾಂಗ್ರೆಸ್. ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಪಕ್ಷ ವಿಸರ್ಜಿಸಲು ಹೇಳಿದ್ದರೂ ಅದನ್ನು ಮಾಡಿಲ್ಲ. ಡಾ. ಅಂಬೇಡ್ಕರ್ ವಿಚಾರದಲ್ಲೂ ಆ ಪಕ್ಷ ಲಾಭ ಪಡೆದುಕೊಂಡಿದೆ. ಸಿದ್ಧಾಂತಕ್ಕೆ ಅನುಗುಣವಾಗಿ ಅದು ನಡೆದುಕೊಂಡಿಲ್ಲ ಎಂದು ಆಕ್ಷೇಪಿಸಿದರು.

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಶ್ರೀಕಾಂತ ಕುಲಕರ್ಣಿ, ಸಹ ಸಂಚಾಲಕ ಆರ್.ಕೆ.ಸಿದ್ದರಾಮಣ್ಣ ಭಾಗವಹಿಸಿದ್ದರು.

Join Whatsapp