ಶಿವಮೊಗ್ಗ ಪೊಲೀಸರಿಂದ ರಾಕೇಶ್ ಟಿಕಾಯತ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು

Prasthutha|

ಶಿವಮೊಗ್ಗ : ಶಿವಮೊಗ್ಗದಲ್ಲಿ ನಡೆದರೈತರ ಮಹಾ ಪಂಚಾಯತ್ ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಮಾರ್ಚ್ 20ರಂದು ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯ ಸೈನ್ಸ್ ಮೈದಾನದಲ್ಲಿ ರೈತರ ಮಹಾ ಪಂಚಾಯತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರಾಜ್ಯದ ರೈತರು ಬೆಂಗಳೂರಿಗೆ ದಿಗ್ಭಂದನ ಹಾಕಬೇಕು. ಟ್ರ್ಯಾಕ್ಟರ್ ಗಳನ್ನೇ ಅಸ್ತ್ರವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದ್ದರು.  ಈ ಮಾತುಗಳು ಪ್ರಚೋದನಕಾರಿ ಮತ್ತು ಜನರಿಗೆ ಹಿಂಸೆಗೆ ಕುಮ್ಮಕ್ಕು ನೀಡುತ್ತವೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಿ ಐಪಿಸಿ ಕಲಂ 153 ಅಡಿಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

“ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ರೀತಿಯಲ್ಲಿ ಟಿಕಾಯತ್ ಮಾತನಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ಆ ಭಾಷಣದಿಂದ ಪ್ರಚೋದನೆಗೊಂಡು ಸಾರ್ವಜನಿಕರು ದೊಂಬಿ ಎಬ್ಬಿಸುವ ಸಾಧ್ಯತೆ ಇದೆ. ಟಿಕಾಯತ್ ಉದ್ದೇಶಪೂರ್ವಕವಾಗಿ ಜನರನ್ನು ಪ್ರಚೋದಿಸಿದ್ದಾರೆ” ಎಂದು ಕೋಟೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

- Advertisement -

 “ರೈತ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರ ನಡೆಸುತ್ತಿರುವ ದುರುದ್ದೇಶಪೂರ್ವಕ ಕೃತ್ಯ ಇದು. ವಾಸ್ತವವಾಗಿ ಅಂದಿನ ಸಭೆಯಲ್ಲಿ ಟಿಕಾಯತ್ ಅವರು ಅಸಂವಿಧಾನಿಕವಾದ, ಅಥವಾ ಯಾವುದೇ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮಾತನ್ನೂ ಆಡಿಲ್ಲ. ಬಿಜೆಪಿ ಸರ್ಕಾರ, ಪೊಲೀಸರನ್ನು ಬಳಸಿಕೊಂಡು ರೈತ ನಾಯಕರನ್ನು ಹತ್ತಿಕ್ಕುವ ಹೇಡಿತನ ಪ್ರದರ್ಶಿಸುತ್ತಿದೆ. ಕೂಡಲೇ ದುರುದ್ದೇಶಪೂರಿತ ಸುಳ್ಳು ಪ್ರಕರಣವನ್ನು ವಾಪಸು ಪಡೆಯದೇ ಇದ್ದರೆ ರೈತ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು” ಎಂದು ಪೊಲೀಸರ ಈ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಮಹಾ ಪಂಚಾಯತ್ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp