ಲಕ್ಷದ್ವೀಪ: ನಟಿ ಆಯಿಶಾ ಸುಲ್ತಾನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Prasthutha|

ಲಕ್ಷದ್ವೀಪ ದ್ವೀಪಗಳ ಜನರ ವಿರುದ್ಧ ಮೋದಿ ಸರ್ಕಾರ ಕೋವಿಡ್ -19 ಸೋಂಕನ್ನು ‘ಜೈವಿಕ ಅಸ್ತ್ರ’ವಾಗಿ ಬಳಸಿದೆ ಎಂದು ಹೇಳಿಕೆ ನೀಡಿದ್ದ ನಟಿ ಹಾಗೂ ರೂಪದರ್ಶಿ ಆಯಿಶಾ ಸುಲ್ತಾನಾ ವಿರುದ್ಧ ಗುರುವಾರ ಲಕ್ಷದ್ವೀಪ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.

- Advertisement -


ಬಿಜೆಪಿಯ ಲಕ್ಷದ್ವೀಪ ಘಟಕದ ಅಧ್ಯಕ್ಷ ಸಿ ಅಬ್ದುಲ್ ಖಾದರ್ ಹಾಜಿ ನೀಡಿದ ದೂರಿನ ಆಧಾರದ ಮೇಲೆ ಕವರತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಕೋವಿಡ್ -19 ಅನ್ನು ಜೈವಿಕ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಕ್ಕಾಗಿ ಆಯಿಶಾ ಸುಲ್ತಾನಾ ವಿರುದ್ಧ ಸೆಕ್ಷನ್ 124 ಎ (ದೇಶದ್ರೋಹ) ಮತ್ತು 153 ಬಿ (ದ್ವೇಷ ಭಾಷಣ) ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಚೆತ್ಲಾಟ್ ದ್ವೀಪದ ನಿವಾಸಿಯಾಗಿರುವ ಆಯಿಶಾ ಸುಲ್ತಾನಾ ಅವರು, ದ್ವೀಪದಲ್ಲಿ ಜೈವಿಕ ಅಸ್ತ್ರವಾಗಿ ಪ್ರಫುಲ್ ಪಟೇಲ್ ಅವರನ್ನು ಕೇಂದ್ರ ಬಳಸುತ್ತಿದೆ ಎಂದಿದ್ದಾರೆ ಎಂದು ಖಾದರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಮಲಯಾಳಂ ಚಾನೆಲ್‌ನಲ್ಲಿ ಇತ್ತೀಚೆಗೆ ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಆಯಿಶಾ ಸುಲ್ತಾನಾ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಖಾದರ್ ಉಲ್ಲೇಖಿಸಿದ್ದಾರೆ.
ಮಲಯಾಳಂ ಚಾನೆಲ್ ಮೀಡಿಯಾ ಒನ್‌ನಲ್ಲಿ ನಡೆದ ಚರ್ಚೆಯಲ್ಲಿ ಆಯಿಶಾ ಸುಲ್ತಾನಾ ಅವರು “ಕೇಂದ್ರದ ಕಣ್ಣು ಲಕ್ಷದ್ವೀಪದ ಮೇಲೆ ಬೀಳುವ ಮೊದಲು ಅಲ್ಲಿ ಕೋವಿಡ್ ಶೂನ್ಯ ಪ್ರಕರಣಗಳು ಇದ್ದವು. ಈಗ, ಇಲ್ಲಿ ಪ್ರತಿದಿನ 100 ಪ್ರಕರಣಗಳು ಕಂಡುಬರುತ್ತಿವೆ. ಕೇಂದ್ರವು ಇಲ್ಲಿ ಜೈವಿಕ ಶಸ್ತ್ರಾಸ್ತ್ರವನ್ನು ನಿಯೋಜಿಸಿದೆ. ಕೇಂದ್ರ ಸರ್ಕಾರವು ಲಕ್ಷದ್ವೀಪದ ಜನರ ವಿರುದ್ಧ ಜೈವಿಕ ಶಸ್ತ್ರಾಸ್ತ್ರವನ್ನು ನಿಯೋಜಿಸಿದೆ ಎಂದು ನಾನು ಇದನ್ನು ಸ್ಪಷ್ಟವಾಗಿ ಹೇಳಬಲ್ಲೆ ಎಂದು ಆಯಿಶಾ ಹೇಳಿದ್ದಳು.
ಈ ಮಧ್ಯೆ, ಆಯಿಷಾ ಸುಲ್ತಾನಾ ತನ್ನ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ, “ನಾನು ಟಿವಿ ಚಾನೆಲ್ ಚರ್ಚೆಯಲ್ಲಿ ಜೈವಿಕ ಶಸ್ತ್ರ ಪದವನ್ನು ಬಳಸಿದ್ದೇನೆ. ನಾನು ಪಟೇಲ್ ಮತ್ತು ಅವರ ನೀತಿಗಳನ್ನು ಜೈವಿಕ ಅಸ್ತ್ರವಾಗಿ ಭಾವಿಸಿದ್ದೇನೆ. ಪಟೇಲ್ ಮತ್ತು ಅವರ ಗುಂಪು ಲಕ್ಷದ್ವೀಪದಲ್ಲಿ ಕೋವಿಡ್ -19 ಸೋಂಕು ಹರಡಿತು. ನಾನು ಪಟೇಲರನ್ನು ಜೈವಿಕ ವೆಪನ್ ಗೆ ಹೋಲಿಸಿದ್ದೇನೆ, ಸರ್ಕಾರ ಅಥವಾ ದೇಶವನ್ನಲ್ಲ, ನಾನು ಅವರನ್ನು ಇನ್ನೇನು ಕರೆಯಬೇಕು…. ” ಎಂದು ಪ್ರತಿಕ್ರಿಯಿಸಿದ್ದಾರೆ.

- Advertisement -

Join Whatsapp