ಗೋಧ್ರಾ ಗಲಭೆಯ ಎಲ್ಲ ಸಾಕ್ಷಿಗಳಿಗೆ ನೀಡಿದ್ದ ಭದ್ರತೆ ರದ್ದು

Prasthutha|

ಹಮದಾಬಾದ್: 2002ರ ಗೋಧ್ರಾ ಘಟನೆಯ ನಂತರದ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣಗಳ ಎಲ್ಲ 131 ಸಾಕ್ಷಿಗಳಿಗೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ. ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ಸಂಸ್ಥೆ ಎಸ್‌ಐಟಿ ಹಿಂಪಡೆದಿದೆ.

- Advertisement -

ಗೋಧ್ರಾ ಗಲಭೆಯ ನಂತರ ನಡೆದಿದ್ದ ಹತ್ಯಾಕಾಂಡ ಪ್ರಕರಣಗಳ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್, ಎಸ್‌ಐಟಿ ನೇಮಕ ಮಾಡಿತ್ತು. ಸಾಕ್ಷಿಗಳು ಮಾತ್ರವಲ್ಲದೆ ಇಬ್ಬರು ವಕೀಲರು ಮತ್ತು ನರೋದಾ ಪಾಟಿಯಾ ಪ್ರಕರಣದ ತೀರ್ಪು ನೀಡಿದ್ದ ವಿಶ್ರಾಂತ ನ್ಯಾಯಾಧೀಶ ಜ್ಯೋತ್ಸಾ ಯಾಗ್ನಿಕ್ ಅವರಿಗೆ ಭದ್ರತೆ ನೀಡಲಾಗುತ್ತಿತ್ತು.

ಗುಜರಾತ್ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಡಿಸೆಂಬರ್ 13 ರಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅದನ್ನು ಜಾರಿ ಮಾಡಿದ್ದೇವೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.

- Advertisement -

‘ಸಾಕ್ಷಿಗಳಿಗೆ ಯಾವುದೇ ಬೆದರಿಕೆಯಿಲ್ಲ. ಅವರಲ್ಲಿ ಯಾರೂ ಇದುವರೆಗೆ ಬೆದರಿಕೆ ಎದುರಿಸಿಲ್ಲ. ಆದ್ದರಿಂದ ಭದ್ರತೆಯನ್ನು ಹಿಂಪಡೆದಿದ್ದೇವೆ ಎಂದು ಎಸ್‌ಐಟಿ ಅಧಿಕಾರಿ ಎ.ಕೆ ಮಲ್ಲೋತ್ರ ತಿಳಿಸಿದರು.

131 ಸಾಕ್ಷಿಗಳ ಭದ್ರತೆಗಾಗಿ 156 ಪೊಲೀಸರು ಮತ್ತು ಸಿಐಎಸ್‌ಎಫ್‌ನ 98 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಎಸ್‌ಐಟಿ ಇದಕ್ಕೂ ಮುನ್ನ 25 ಸಾಕ್ಷಿಗಳಿಗೆ ನೀಡಿದ್ದ ಭದ್ರತೆಯನ್ನು 2021ರ ಆಗಸ್ಟ್‌ನಲ್ಲಿ ವಾಪಸ್‌ ಪಡೆದಿತ್ತು.

Join Whatsapp