ಪಂಜಾಬ್ ನಲ್ಲಿ ಪ್ರಧಾನಿ ಮೋದಿಗೆ ಭದ್ರತಾ ಲೋಪ ಪ್ರಕರಣ: ಬಿಜೆಪಿಯಿಂದ ಮಂಗಳೂರು ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ

Prasthutha|

- Advertisement -

ಮಂಗಳೂರು : ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ವೈಫಲ್ಯ ಆಗಿರುವುದನ್ನು ಖಂಡಿಸಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಗುರುವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಹಮ್ಮಿಕೊಂಡ ಪ್ರತಿಭಟನೆ ವೇಳೆ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು.

ಬಿಜೆಪಿ ಯುವಮೋರ್ಚಾ ನಗರ ಘಟಕದ ಅಧ್ಯಕ್ಷ ಸಚಿನ್ ರಾಜ್ ರೈ ನೇತೃತ್ವದಲ್ಲಿ 50ರಷ್ಟು ಮಂದಿ ಯುವಕರು ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯ ಮುಂದೆ ಜಮಾಯಿಸಿ, ಮೋದಿ ಪರವಾಗಿ ಜೈಕಾರ ಹಾಕುತ್ತಾ ದೇಶದ ಪ್ರಧಾನಿಗೆ ಭದ್ರತೆ ನೀಡಲಾಗದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗಿದ್ದಾರೆ. ಈ ವೇಳೆ, ಕೆಲವು ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯ ಮೆಟ್ಟಲು ಹತ್ತಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ್ದಾರೆ. ಬಂದೋಬಸ್ತ್ ಬಂದಿದ್ದ ಕದ್ರಿ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಮನವೊಲಿಸಿ, ನಿಮ್ಮದೇ ಸರಕಾರ ಇದ್ದು ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬೇಡಿ. ಕಾಂಗ್ರೆಸ್ ಕಚೇರಿಗೆ ನುಗ್ಗುವುದು ಸರಿಯಲ್ಲ ಎನ್ನುತ್ತಾ ಹಿಂದಕ್ಕೆ ತೆರಳುವಂತೆ ಪ್ರಯತ್ನಪಟ್ಟಿದ್ದಾರೆ.

- Advertisement -

ಇದೇ ವೇಳೆ, ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದ ಕೆಲ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ್ದಾರೆ. ಮೋದಿ ಪರ ಜೈಕಾರ ಹಾಕಿದ್ದಕ್ಕೆ ಪ್ರತಿಯಾಗಿ ಡೌನ್ ಡೌನ್ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಅಷ್ಟಾಗುತ್ತಿದ್ದಂತೆ ಎರಡೂ ಗುಂಪಿನ ನಡುವೆ ಜಟಾಪಟಿ ನಡೆದಿದೆ. ಪೊಲೀಸರ ಮಧ್ಯೆಯೇ ತೀವ್ರ ತಳ್ಳಾಟ, ನೂಕಾಟ ನಡೆದಿದ್ದು, ಹೊಯ್ ಕೈ ಆಗುವಷ್ಟರ ಮಟ್ಟಿಗೆ ಪ್ರತಿಭಟನೆ ನಡೆದಿದೆ. ಇದೇ ಸಂದರ್ಭದಲ್ಲಿ ನಾವು ಸತ್ತರೂ ಕಾಂಗ್ರೆಸ್ ಕಚೇರಿಗೆ ನಿಮ್ಮನ್ನು ನುಗ್ಗಲು ಬಿಡುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

Join Whatsapp