ವಿಮಾನ ನಿಲ್ದಾಣದಲ್ಲೇ ಜೊಕೊವಿಚ್ ವೀಸಾ ರದ್ದು ಮಾಡಿದ ಆಸ್ಟ್ರೇಲಿಯಾ !

Prasthutha|

ಮೆಲ್ಬೋರ್ನ್: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಭಾಗವಹಿಸಲು ಮೆಲ್ಬೋರ್ನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಶ್ವದ ನಂ.1 ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್‌ ಹಾಗೂ ಅವರ ಸಹಾಯಕ ಸಿಬ್ಬಂದಿ ತಂಡದ ವೀಸಾಗಳನ್ನು ಆಸ್ಟ್ರೇಲಿಯಾ ರದ್ದುಗೊಳಿಸಿದೆ. ‘ಆಸ್ಟ್ರೇಲಿಯಾಕ್ಕೆ ಪ್ರವೇಶ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಪೂರೈಸಲು ಜೊಕೊವಿಚ್‌ ವಿಫಲರಾಗಿದ್ದಾರೆ. ಹೀಗಾಗಿ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ,’ ಎಂದು ಆಸ್ಟ್ರೇಲಿಯನ್ ಗಡಿ ರಕ್ಷಣಾ ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

ವಿಕ್ಟೋರಿಯಾ ರಾಜ್ಯ ಸರ್ಕಾರ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಪಾಲ್ಗೊಳ್ಳಲು ಲಸಿಕೆ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ವಿಮಾನ ನಿಲ್ದಾಣದಿಂದ ಜಾಕೊವಿಚ್‌ ಹಾಗೂ ಸಹಾಯಕ ಸಿಬ್ಬಂದಿ ತಂಡವನ್ನು ಕ್ವಾರಂಟೈನ್’ಗಾಗಿ ಸರ್ಕಾರಿ ಸ್ವಾಮ್ಯದ ಹೊಟೇಲ್’ಗೆ ಕರೆದೊಯ್ಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ವೈದ್ಯಕೀಯ ವಿನಾಯಿತಿ ಪಡೆದಿರುವುದಾಗಿ ಜೊಕೊವಿಚ್‌ ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದರು.

9 ಬಾರಿಯ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ಜೊಕೊವಿಚ್‌,  ಲಸಿಕೆ ದಾಖಲಾತಿಯಿಂದ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವೈದ್ಯಕೀಯ ಮಂಡಳಿಗಳು ಅನುಮೋದಿಸಿದ್ದವು. ಹೀಗಾಗಿ ಕೂಟದ ಆಯೋಜಕರು ಜೊಕೊವಿಚ್‌ಗೆ ಲಸಿಕೆ ವಿನಾಯಿತಿ ನೀಡಿದ್ದರು. ಇದು ಆಸ್ಟ್ರೇಲಿಯಾದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌,  ನಿಯಮಗಳು ಎಲ್ಲರಿಗೂ ಒಂದೇ ಆಗಿದೆ. ಜೊಕೊವಿಚ್‌ ಬಳಿ ವೈದ್ಯಕೀಯ ಅನುಮತಿ ಪಡೆದಿರುವುದಕ್ಕೆ ಸೂಕ್ತ ದಾಖಲೆ ಒದಗಿಸಲು ಕೇಳಿದ್ದು, ತಪ್ಪಿದ್ದಲ್ಲಿ ತಮ್ಮ ದೇಶಕ್ಕೆ ಮರಳುವಂತೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಈ ಬಾರಿಯ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್‌ ಸ್ಲಾಂನಲ್ಲಿ ಜೊಕೊವಿಚ್‌ ಆಡುವುದು ಅನುಮಾನವಾಗಿದೆ.  ‘ವೈಯಕ್ತಿಕವಾಗಿ ನಾನು ಲಸಿಕೆಗಳ ಪರ ಅಲ್ಲ. ಲಸಿಕೆ ಪಡೆಯುವಂತೆ ನನ್ನನ್ನು ಒತ್ತಾಯಿಸುವುದನ್ನು ನಾನು ಇಷ್ಟಪಡಲಾರೆ ಎಂದು ಜೊಕೊವಿಚ್‌ ಹಿಂದೆಯೇ ಹೇಳಿದ್ದರು.

Join Whatsapp