ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ಬಾಬ್ರಿ ಮಸೀದಿ ದ್ವಂಸ ಪ್ರಹಸನ’ ಪ್ರದರ್ಶನ : SDPI ಆಕ್ರೋಶ

Prasthutha|

►ಶಾಲಾಡಳಿತ ಮಂಡಳಿಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಆಗ್ರಹ

- Advertisement -

ಪುತ್ತೂರು : ನಗರದ ವಿವೇಕಾನಂದ ಕಾಲೇಜಿನಲ್ಲಿ ‘ಬಾಬ್ರಿ ಮಸೀದಿ ದ್ವಂಸ ಪ್ರಹಸನ’ ಪ್ರದರ್ಶನ ಮಾಡಿದ ಶಾಲಾಡಳಿತ ಮಂಡಳಿಯ ನಡೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷವು ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ವಿವೇಕಾನಂದ ಕಾಲೇಜ್ ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿಯು ಬಾಬ್ರಿ ಮಸೀದಿ ಧ್ವಂಸ ಮಾಡಿದ ಭಯೋತ್ಪಾದನೆಯ ಕೃತ್ಯವನ್ನು ವಿದ್ಯಾರ್ಥಿಗಳ ಮೂಲಕ ನಾಟಕ‌ ಮಾಡಿಸಿದೆ. ಸೌಹಾರ್ದತೆ, ಸಹಬಾಳ್ವೆಯನ್ನು ಕಲಿಸಬೇಕಾದ ವಿದ್ಯಾ ಕೇಂದ್ರದಲ್ಲಿ ಪರಸ್ಪರ ದ್ವೇಷ, ಕೋಮು ಗಲಭೆಗೆ ಆಸ್ಪದ ಮಾಡುವ ಕೃತ್ಯವನ್ನು ನಡೆಸಲು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.

- Advertisement -

ವಿದ್ಯಾ ಕೇಂದ್ರಕ್ಕೆ ವಿವೇಕಾನಂದರಂತಹ ಮಹಾನ್ ದೇಶ ಭಕ್ತ ಹಾಗೂ ಪುಣ್ಯಾತ್ಮರ ಹೆಸರಿಟ್ಟುಕೊಂಡು ಅವರ ತತ್ವಕ್ಕೆ ವಿರುದ್ಧವಾಗಿ ಭಯೋತ್ಪಾದನಾ ಕೃತ್ಯದ ನಾಟಕವನ್ನು ಮಾಡಿ ಅದನ್ನು ದೇಶಪ್ರೇಮಕ್ಕೆ ಹೋಲಿಸುವ ಸಂಘಪರಿವಾರ ಹಿನ್ನೆಲೆಯ ಶಾಲಾಡಳಿತ ಮಂಡಳಿಯ ನಡೆಯು ಖಂಡನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಬಾಬರಿ ಮಸೀದಿ ತೀರ್ಪು ನೀಡುವ ಸಂದರ್ಭದಲ್ಲಿ ಮಸೀದಿಯ ನೆಲಸಮವೂ ಅಕ್ರಮ, ಅಕ್ಷಮ್ಯ ಹಾಗೂ ಇದು ಕಾನೂನು ಹಾಗು ಸಂವಿಧಾನಕ್ಕೆ ವಿರುದ್ಧವಾದ ನಡೆ ಎಂದು ಸ್ಪಷ್ಟನೆ ನೀಡಿತ್ತು. ಆದರೆ ಸಂಘಪರಿವಾರ ಮನಸ್ಥಿತಿಯ ಶಾಲಾಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಪರಸ್ಪರ ಶಾಂತಿ, ಸೌಹಾರ್ದತೆ ಸಹಬಾಳ್ವೆಯನ್ನು ಕಲಿಸುವುದನ್ನು ಬಿಟ್ಟು ಪರಸ್ಪರ ದ್ವೇಷ ಹರಡಲು ಪ್ರೇರೇಪಿಸಿದ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ದ.ಕ ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಬ್ರಾಹಿಂ ಸಾಗರ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp