ಮಂಗಳೂರು: ಬಿಜೆಪಿ ಸರ್ಕಾರದ ದ್ವೇಷ ಮತ್ತು ದುರಾಡಳಿತದ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ಹಮ್ಮಿಕೊಂಡಿರುವ ಜನಾಧಿಕಾರ ಸಮಾವೇಶ ಶುಕ್ರವಾರ ಮಂಗಳೂರಿನ ಹೊರವಲಯ ಕಣ್ಣೂರಿನ ಮರ್ಹೂಮ್ ಕೆ.ಎಂ.ಶರೀಫ್ ವೇದಿಕೆಯಲ್ಲಿ ನಡೆಯಿತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಉದ್ಘಾಟನಾ ಭಾಷಣ ಮಾಡಿದ ಅವರು, ಶಾಂತಿಯ ಬೀಡಾಗಿದ್ದ ಕರ್ನಾಟಕ ಇಂದು ಅಶಾಂತಿಯ ನಾಡಾಗಿ ಮಾರ್ಪಟ್ಟಿದೆ. ಮಸೀದಿ- ಚರ್ಚ್ಗಳ ಮೇಲೆ ದಾಳಿ, ದಲಿತರು, ಅಲ್ಪಸಂಖ್ಯಾತರ ಮೇಲಿನ ದಾಳಿ ಇಲ್ಲಿ ಸಾಮಾನ್ಯವೆಂಬಂತಾಗಿದೆ. ಮುತಾಲಿಕ್, ಈಶ್ವರಪ್ಪರಂತಹ ಸಂಘಪರಿವಾರದ ನಾಯಕರು ಎಗ್ಗಿಲ್ಲದೆ ನಾಲಗೆ ಹರಿಯಬಿಡುತ್ತಿದ್ದಾರೆ. ಸಂಘಪರಿವಾರದ ನಾಯಕರ ಈ ಕೃತ್ಯಕ್ಕೆ ಸ್ವತಃ ಮುಖ್ಯಮಂತ್ರಿಯವರೇ ಅಭಯ ನೀಡುತ್ತಿದ್ದಾರೆ. ಇದರಿಂದ ಪ್ರೇರಣೆಗೊಂಡ ಸಂಘಪರಿವಾರದ ಕಾರ್ಯಕರ್ತರು ದುಷ್ಕೃತ್ಯದಲ್ಲಿ ತೊಡಗಿದ್ದಾರೆ. ಸಚಿವ ಸಂಪುಟದ ಸದಸ್ಯರು ಕೂಡ ನರಮೇಧ, ಹತ್ಯಾಕಾಂಡದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭಿವೃದ್ಧಿ ವಿಷಯವನ್ನು ಮುಂದಿಟ್ಟು ಮತ ಕೇಳಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬರುವುದಿಲ್ಲ ಎಂಬ ವಾಸ್ತವದ ಅರಿವು ಬಿಜೆಪಿಗೆ ಇದೆ. ಈ ಹಿನ್ನೆಲೆಯಲ್ಲಿ ಹಿಂದೂ – ಮುಸ್ಲಿಮ್ ಎಂಬ ಕೋಮು ವಿಷಯವನ್ನು ಮುಂದಿಟ್ಟು ಸಮಾಜ ವಿಭಜನೆಯಲ್ಲಿ ತೊಡಗಿದೆ ಎಂದು ಟೀಕಿಸಿದ ಅವರು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಉತ್ತರ ಭಾರತದಲ್ಲಿ ಹಿಜಾಬ್ ವಿಷಯ ಬೇಯುವುದಿಲ್ಲ ಎಂದು ಮನಗಂಡ ಸಂಘಪರಿವಾರ, ದಕ್ಷಿಣ ರಾಜ್ಯಗಳಲ್ಲಿ ಹಿಜಾಬ್ ವಿವಾದ ಸೃಷ್ಟಿಸಿ ಮುಸ್ಲಿಮ್ ಮಹಿಳೆಯರಿಗೆ ಕಿರುಕುಳ ನೀಡುತ್ತಿದೆ. ಹಿಜಾಬ್ ಬಳಿಕ ಹಲಾಲ್ ವಿವಾದ ಸೃಷ್ಟಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯಿತು. ಇದೀಗ ಎಲ್ಲೆಂದರಲ್ಲಿ ಲಿಂಗ ಉದ್ಭವವಾಗುವ ಸುದ್ದಿ ಕೇಳಿಬರುತ್ತಿದೆ. ಮಳಲಿ ಮಸೀದಿಯನ್ನು ಗುರಿಯಾಗಿಸಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರು.
ಬಿಜೆಪಿ ಮಾತ್ರವಲ್ಲ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೂಡ ದೇಶವನ್ನು ಲೂಟಿ ಮಾಡಿತ್ತು. ಕಾಂಗ್ರೆಸ್ ನಾಯಕರು ಕೂಡ ಸಾಚಾ ಅಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೂಡ ರಾಜ್ಯವನ್ನು ಲೂಟಿ ಮಾಡಿದ್ದಾರೆ. ದೇಶದಲ್ಲಿ ಖಾಸಗೀಕರಣವನ್ನು ಮೊದಲು ಆರಂಭಿಸಿದ್ದೇ ಕಾಂಗ್ರೆಸ್. ಈಗ ಅದನ್ನು ಮೋದಿ ಮುಂದುವರಿಸಿದ್ದಾರೆ. ಇದರಿಂದಲೇ ಕಾಂಗ್ರೆಸ್ ಪಕ್ಷವನ್ನು ಉತ್ತರ ಭಾರತದವರು ಕಸದ ಬುಟ್ಟಿಗೆ ಎಸೆದಿದ್ದಾರೆ. ದಕ್ಷಿಣ ರಾಜ್ಯಗಳಲ್ಲೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಅವರು ಭವಿಷ್ಯ ನುಡಿದರು.
ಮುಂಬರುವ ಚುನಾವಣೆಯಲ್ಲಿ ಪರ್ಯಾಯ ರಾಜಕೀಯ ಪಕ್ಷವಾಗಿ ಎಸ್ ಡಿಪಿಐ ರೂಪುಗೊಳ್ಳಲಿದೆ. ದೇಶದ ಸಮಗ್ರ ಅಭಿವೃದ್ಧಿ ಎಸ್ ಡಿಪಿಐಗೆ ಮಾತ್ರ ಸಾಧ್ಯ. ಆದ್ದರಿಂದ ಎಸ್ ಡಿಪಿಐ ಪಕ್ಷದ ಕೈಗಳನ್ನು ಬಲಪಡಿಸಬೇಕು. ಈ ಪಕ್ಷವನ್ನು ಗಟ್ಟಿಗೊಳಿಸುವ ಮೂಲಕ ದೇಶದ ಚಿತ್ರಣವನ್ನೇ ಬದಲಾಯಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಮಾವೇಶದ ಅಧ್ಯಕ್ಷತೆಯನ್ನು ಎಸ್ ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ವಹಿಸಿದ್ದಾರೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಎಸ್ ಡಿಪಿಐ ಇಂದು ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಬೆಳೆಯುತ್ತಿದೆ. ಜನಪರ ಹೋರಾಟ, ಪಾರದರ್ಶಕ ನಾಯಕತ್ವದಿಂದ ಪಕ್ಷ ಇಂದು ಜನಮನ್ನಣೆ ಗಳಿಸಿದೆ. ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಶಕ್ತಿಶಾಲಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ಕೇರಳ ರಾಜ್ಯಾಧ್ಯಕ್ಷ ಅಶ್ರಫ್ ಮೌಲವಿ ಮುವಾಟ್ಟುಪುಝ, ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ , ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೋ ಫ್ರಾಂಕೋ, SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್ ನೆಲಮಂಗಲ. ಮುಖ್ಯ ಅತಿಥಿಗಳಾಗಿ ಪಕ್ಷದ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್ ಪುತ್ತೂರು, ಅಫ್ಸರ್ ಕೊಡ್ಲಿಪೇಟೆ, ಅಶ್ರಫ್ ಮಾಚಾರ್, ವುಮೆನ್ ಇಂಡಿಯಾ ಮೂವ್ ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್, ಆಯಿಶಾ ಬಜ್ಪೆ, ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲಾ ಪೂಂಜಾಲಕಟ್ಟೆ, ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫರ್ಝಾನಾ ಮಹಮ್ಮದ್ , ಮತ್ತಿತರ ಗಣ್ಯರು ಪಾಲ್ಗೊಂಡಿದ್ದಾರೆ.
ಅಬ್ದುಲ್ ಮಜೀದ್ ಖಾನ್, ಅಕ್ಬರಲಿ, ರಿಯಾಝ್ ಕಡಂಬು, ಅಬೂಬಕ್ಕರ್ ಕುಳಾಯಿ, ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಉತ್ತರ ಕನ್ನಡ ತೌಫೀಕ್ ಬ್ಯಾರಿ, ಚಿಕ್ಕಮಗಳರು ಗೌಸ್, ಸಕಲೇಶಪುರ ಸಲೀಂ, ಕಸಾರಗೋಡು ಮುಹಮ್ಮದ್, ನಸ್ರೀಯಾ ಬೆಳ್ಳಾರೆ, ಮಿಸ್ರಿಯಾ ಕಣ್ಣೂರು, ವಿಕ್ಟರ್ ಮಾರ್ಟೀಸ್, ಮುನೀಬ್ ಬೆಂಗರೆ, ಸಂಶಾದ್ ಅಬೂಬಕರ್, ಅಬ್ದುಲ್ ಹಮೀದ್ , ಪಕ್ಷದ ಜನಪ್ರತಿನಿಧಿಗಳು ಮತ್ತಿತರರು ಪಾಲ್ಗೊಂಡಿದ್ದಾರೆ.
ಇದಕ್ಕೂ ಮೊದಲು ಬಿಜೆಪಿ ಸರ್ಕಾರದ ದುರಾಡಳಿತವನ್ನು ಬಿಂಬಿಸುವ ನಾಟಕ ಪ್ರದರ್ಶನ ನಡೆಯಿತು. ಎಸ್ ಡಿಪಿಐ ‘ಜನಾಧಿಕಾರ ಸಮಾವೇಶ’ಕ್ಕೆ ಕರಾವಳಿ ಜಿಲ್ಲೆಗಳ ಮೂಲೆ ಮೂಲೆಗಳಿಂದ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ದಾರೆ.