ದುರ್ಗಾದೌಡ್ ಮೆರವಣಿಗೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿರುವ ಆನಂದ ಕುಲಕರ್ಣಿ ವಿರುದ್ಧ ಕ್ರಮ ಕೈಗೊಳ್ಳಲು ಎಸ್ ಡಿಪಿಐ ಆಗ್ರಹ

Prasthutha|

ಬಿಜಾಪುರ : ಬಿಜಾಪುರದ ಮಹಿಳಾ ವಿಶ್ವವಿದ್ಯಾನಿಲಯದ ಆನಂದ ಕುಲಕರ್ಣಿ ಎಂಬ ಉಪನ್ಯಾಸಕ ದುರ್ಗಾ ದೌಡ್ ಮೆರವಣಿಗೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದು, ಸಂವಿಧಾನವಿರೋಧಿ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂವಿಧಾನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಪೋಸ್ಟ್ ಗಳನ್ನು ನಿರಂತರವಾಗಿ ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದರೂ ಪೊಲೀಸರು ದೂರು ಸ್ವೀಕರಿಸಲಿಲ್ಲ. ವಿಶ್ವವಿದ್ಯಾನಿಲಯವು ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಎಂದು ಎಸ್.ಡಿ.ಪಿ.ಐ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಒತ್ತಾಯಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಉದ್ಯೋಗದಲ್ಲಿರುವವರು ಈ ರೀತಿಯ ಕಾನೂನುಬಾಹಿರ ಹೇಳಿಕೆ ನೀಡಬಾರದು ಎಂಬ ಕನಿಷ್ಠ ಪ್ರಜ್ಞೆಯೂ ಈ ಉಪನ್ಯಾಸಕನಿಗೆ ಇಲ್ಲದಿರುವುದು ದುರಂತ. ಇವರು ಸಂಘಪರಿವಾರದೊಂದಿಗೆ ಗುರುತಿಸಿಕೊಂಡಿದ್ದು, ತಕ್ಷಣ ಅವರನ್ನು ಉಪನ್ಯಾಸಕ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.


ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ವಿಜಯದಶಮಿ ಆಚರಣೆ ಮಾಡುವಾಗ ಮೆರವಣಿಗೆಗಳಲ್ಲಿ ತ್ರಿಶೂಲ ವಿತರಣೆ, ಆಯುಧ ಪ್ರದರ್ಶನ, ಸಾರ್ವಜನಿಕವಾಗಿ ತಲವಾರು ಪ್ರದರ್ಶನ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳು ನಡೆದಿವೆ. ಇದರ ವಿರುದ್ಧ ಹೆಚ್ಚಿನ ಕಡೆಗಳಲ್ಲಿ ಯಾವುದೇ ಕೇಸುಗಳು ದಾಖಲಾಗಿಲ್ಲ. ಕೆಲವೆಡೆ ಮಾತ್ರ ದುರ್ಬಲ ಕೇಸುಗಳನ್ನು ಹಾಕಿ, ಶಾಂತಿಭಂಗದ ಯತ್ನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ತಿಳಿಸಿದರು.

- Advertisement -


ಬೆಳಗಾವಿ ಇಳಕಲ್ ಮತ್ತು ಗದಗದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆದಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ರೀತಿಯಲ್ಲಿ ಸಂಘಪರಿವಾರದ ಚಟುವಟಿಕೆಗಳು ನಡೆಯುತ್ತಿವೆ. ಸರಕಾರ ಕೂಡಲೇ ಶಾಂತಿಭಂಗ ಮಾಡುವ ಎಲ್ಲರನ್ನೂ ಪಕ್ಷ-ಧರ್ಮ ತಾರತಮ್ಯ ಮಾಡದೆ ಕಠಿಣ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.


ಬಿಜಾಪುರ ಜಿಲ್ಲಾಧ್ಯಕ್ಷರಾಗಿ ಅಥಾವುಲ್ಲಾ ದ್ರಾಕ್ಷಿ ಆಯ್ಕೆ
ಬಿಜಾಪುರದಲ್ಲಿ ನಡೆದ ಎಸ್.ಡಿ.ಪಿ.ಐ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ 2021-24ರ ಅವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಅವರು ಚುನಾವಣೆ ಅಧಿಕಾರಿಗಳಾಗಿ, ರಾಜ್ಯ ಸಮಿತಿ ಸದಸ್ಯ ಅಕ್ರಮ್ ಹಸನ್ ಉಪ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೇಟೆ ಉದ್ಘಾಟನೆ ಭಾಷಣ ಮಾಡಿದರು.


2021-24ರ ಅವಧಿಗೆ ಜಿಲ್ಲಾ ಪದಾಧಿಕಾರಿಗಳಿಗೆ ಹಾಗೂ ಜಿಲ್ಲಾ ಸಮಿತಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ಅಥಾವುಲ್ಲಾ ದ್ರಾಕ್ಷಿ, ಉಪಾಧ್ಯಕ್ಷರಾಗಿ ನಿಸಾರ್ ಮನಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಇಸಾಕ್ ಸೈಯದ್, ಕಾರ್ಯದರ್ಶಿಯಾಗಿ ನೂರ್ ಸರವನ್, ಖಜಾಂಚಿಯಾಗಿ ಸಮಿಉಲ್ಲಾ ಬಡೇಘರ್, ಸಮಿತಿ ಸದಸ್ಯರುಗಳಾಗಿ ಜಾಫರ್ ಇನಾಮದಾರ್ ಮತ್ತು ಯಾಸಿರ್ ಇನಾಮದಾರ್ ಆಯ್ಕೆಯಾಗಿದ್ದಾರೆ ಎಂದು ಅಬ್ದುಲ್ ಲತೀಫ್ ತಿಳಿಸಿದರು.
ರಾಜ್ಯ ಮಾಧ್ಯಮ ಉಸ್ತುವಾರಿ ಅಕ್ರಂ ಹಸನ್ರವರ ಪಕ್ಷದ ಕಾರ್ಯಚಟುವಟಿಕೆಗಳು ಬಗ್ಗೆ ಗೋಷ್ಠಿಯಲ್ಲಿ ವಿವರವಾಗಿ ತಿಳಿಸಿದರು. ಪತ್ರಿಕಾಗೋಷ್ಠಿ ಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೇಟೆ, ಬಿಜಾಪುರ ಜಿಲ್ಲೆ ಪಧಾಧಿಕಾರಿಗಳು ಉಪಸ್ಥಿತರಿದ್ದರು.

Join Whatsapp