ಸುಳ್ಯದಲ್ಲಿ ಅಕ್ರಮ ಬಂದೂಕು ಘಟಕಕ್ಕೆ ದಾಳಿ : ಪ್ರಕರಣದ ನೈಜತೆ ಬಯಲಿಗೆಳೆಯಲು ಎಸ್‌ಡಿಪಿಐ ಆಗ್ರಹ

Prasthutha|

ಬೆಂಗಳೂರು :  ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಪೋಲಿಸ್ ಠಾಣಾ  ವ್ಯಾಪ್ತಿಯಲ್ಲಿ ಅಕ್ರಮ ಬಂದೂಕು ತಯಾರಿಕಾ ಘಟಕಕ್ಕೆ ದಾಳಿ ನಡೆಸಿ 4  ಆರೋಪಿಗಳನ್ನು  ಪತ್ತೆ ಹಚ್ಚಿ ಬಂಧಿಸಿದ‌ ಪೋಲಿಸರ ಕಾರ್ಯವೈಖರಿಯು ಶ್ಲಾಘನೀಯವಾಗಿದೆ. ಆದರೆ ಈ ಅಕ್ರಮ ಬಂದೂಕು ತಯಾರಿಕೆಯ ಹಿಂದಿನ ಜಾಲವನ್ನು ಪೋಲಿಸ್ ಇಲಾಖೆ ಬಯಲಿಗೆಳೆಯಬೇಕಿದೆ ಎಂದು ಎಸ್ಡಿಪೈ ರಾಜ್ಯ ಸಮಿತಿ ಒತ್ತಾಯಿಸಿದೆ.

- Advertisement -

 ರಾಜ್ಯದಲ್ಲಿ ಸಾಹಿತಿ ಕಲ್ಬುರ್ಗಿ ಹತ್ಯೆ ನಡೆದಿತ್ತು, ನಂತರ ನಡೆದ ಗೌರಿ ಲಂಕೇಶ್ ಹಂತಕರಿಗೆ ಬಂದೂಕು ತರಬೇತಿ ನೀಡಿದ್ದು ಸುಳ್ಯ ಭಾಗದಲ್ಲಿ ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿತ್ತು, ಅದೇ ರೀತಿ ಇದಕ್ಕಿಂತ ಮುಂಚೆ ನಡೆದ ಗೋವ ಸ್ಪೋಟದ ಆರೋಪಿ ಜಯಪ್ರಕಾಶ್ ಬೆಳ್ಚಡ ಎಂಬವನ ಮನೆ ಕೂಡ ಈಗ ಸಿಕ್ಕಿ ಬಿದ್ದಿರುವ ಎರಡು ಆರೋಪಿಗಳ ಊರಾದ ಕಡಬ ಸಮೀಪವೇ ಆಗಿದೆ.ಈ ಭಯೋತ್ಪಾದಕ ಈಗ ಭೂಗತನಾಗಿದ್ದಾನಲ್ಲದೆ ಆತನನ್ನು ಹುಡುಕಿಕೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಡಬಕ್ಕೆ ಆಗಮಿಸಿ ಸಾರ್ವಜನಿಕ ಸ್ಥಳಗಳಲ್ಲಿ ಆತನ ಭಿತ್ತಿಚಿತ್ರಗಳನ್ನು ಅಂಟಿಸಿ ಆತನ ಸುಳಿವು ನೀಡಿದವರಿಗೆ 25000 ರೂಪಾಯಿಗಳ ಬಹುಮಾನ ಕೂಡ ಘೋಷಿಸಿತ್ತು, ಈ ಎಲ್ಲಾ ಘಟನೆಗಳನ್ನು ಗಮನಿಸುವಾಗ ಈಗ ಪತ್ತೆ ಹಚ್ಚಿದ ಅಕ್ರಮ ಬಂದೂಕು ತಯಾರಿಕಾ ಘಟಕದ ಹಿಂದೆ ಒಂದು ದೊಡ್ಡ ಜಾಲವೇ ಇದೆ ಎಂಬುದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಹಾಗಾಗಿ ಈ ಪ್ರಕರಣವನ್ನು ರಾಜ್ಯದ ಉನ್ನತ ನಿಷ್ಠಾವಂತ ಪೋಲಿಸ್ ಅಧಿಕಾರಿಗಳ ಮೂಲಕ ಸಮಗ್ರವಾದ ತನಿಖೆ ನಡೆಸಿ ಈ ಪ್ರಕರಣದ ಹಿಂದಿನ ನೈಜತೆಯನ್ನು ಬಯಲಿಗೆಳೆಯಬೇಕೆಂದು    ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಮಜೀದ್ ಖಾನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp