ಬಳ್ಳಾರಿ; ಹಿಜಾಬ್ ಪ್ರಕರಣ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪು ಬಹಳ ಮುಖ್ಯವಾಗಿದೆ. ಇದು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇಡೀ ದೇಶದಲ್ಲಿರುವ ವಿಚಾರ. ಹೀಗಾಗಿ ಅಂತಿಮ ತೀರ್ಪು ಬರುವವರೆಗೂ ನಾವು ಕಾದು ನೋಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಬಸವರಾಜ ಬೊಮ್ಮಾಯಿ, ಹಿಜಾಬ್ ಪ್ರಕರಣ ನ್ಯಾಯಾಂಗದ ವಿಚಾರವಾಗಿದೆ. ಇಬ್ಬರು ನ್ಯಾಯಮೂರ್ತಿಗಳು ತೀರ್ಪನ್ನು ಕೊಟ್ಟಿದ್ದಾರೆ. ನ್ಯಾಯಮೂರ್ತಿಗಳ ತೀರ್ಪನ್ನು ಲಿಖಿತವಾಗಿ ನೋಡಿ ಪ್ರತಿಕ್ರಿಯೆ ಕೊಡಬೇಕಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಿಜಾಬ್ ವಿಚಾರದಲ್ಲಿ ಹತ್ತು ಹಲವಾರು ಆಯಾಮಗಳಿವೆ. ವಿದ್ಯಾರ್ಥಿಗಳ ಬೇಡಿಕೆ, ಸರ್ಕಾರದ ಆಜ್ಞೆ ಬೇರೆ ಬೇರೆಯಾಗಿದೆ. ರಾಷ್ಟ್ರ, ಅಂತರಾಷ್ಟ್ರೀಯ ವಿಚಾರಗಳು ಇದರಲ್ಲಿ ಆಳವಡಿಕೆ ಆಗಿರುವುದರಿಂದ ಸ್ಪಷ್ಟವಾದ ತೀರ್ಪನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಮಳೆ ಹಾನಿಯ ಪರಿಹಾರಕ್ಕೆ ಸಿಎಂ ಬೊಮ್ಮಾಯಿ ಸೂಚನೆ
ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ತಿಳಿಯಲು 16 ಜಿಲ್ಲಾಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿದ್ದೇನೆ. ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆ ಅಧಿಕವಾಗಿ ಆಗುತ್ತದೆ. ಅಕ್ಟೋಬರ್ 20 ರ ವರೆಗೂ ಅಧಿಕವಾದ ಮಳೆ ಆಗುವ ಸಾಧ್ಯತೆಯಿದೆ. ಹೀಗಾಗಿ ಅದಕ್ಕೆ ಪೂರ್ವಭಾವಿ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ. ಈ ತಿಂಗಳಲ್ಲಿ ಮಳೆಯಿಂದಾದ ಮನೆ ಮತ್ತು ಬೆಳೆ ಹಾನಿಗೆ ಪರಿಹಾರ ನೀಡಲಾಗುತ್ತಿದ್ದೆ. ಪ್ರಾಣ ಹಾನಿಯಾದವರ ಕುಟುಂಬಕ್ಕೆ ಪರಿಹಾರವನ್ನು ಈಗಾಗಲೇ ನೀಡಲಾಗಿದ್ದು, ಇನ್ನುಳಿದವರಿಗೂ 24 ಗಂಟೆಯಲ್ಲಿ ಪರಿಹಾರ ನೀಡಲು ಆದೇಶವನ್ನು ಮಾಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೆಟ್ಟ ಶಕ್ತಿಗಳ ದಮನಕ್ಕೆ ಕಾನೂನು ಕ್ರಮ
ಹಾವೇರಿಯಲ್ಲಿ ಶಾಂತಿಯುತ ಪಥ ಸಂಚಲನವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಹಮ್ಮಿಕೊಂಡಿದ್ದರು. ಒಂದು ವಾರದಿಂದ ಎಲ್ಲ ತಯಾರಿ ಅಲ್ಲಿ ನಡೆಯುತ್ತಿತ್ತು. ಪಥ ಸಂಚಲನದ ಮಾರ್ಗವನ್ನು ನೋಡಲು ಹೋದವರ ಮೇಲೆ ಅನವಶ್ಯಕವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ಇಡೀ ಜಿಲ್ಲೆಯ ಶಾಂತಿಯನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ 20 ಜನರನ್ನು ಬಂಧಿಸಲಾಗಿದೆ. ಇಂತಹ ಕೆಟ್ಟ ಶಕ್ತಿಗಳ ದಮನಕ್ಕೆ ಕಾನೂನಿನ ಮುಖಾಂತರ ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದರು.