ಟಿಕೆಟ್ ವಂಚಿತ ಸತೀಶ್ ಕುಮಾರ್ ಶರ್ಮಾ ಬಿಜೆಪಿಗೆ ರಾಜೀನಾಮೆ
Prasthutha: January 19, 2022

ಲಕ್ನೋ: ಮುಂಬರುವ ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಪಕ್ಷ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಹಿರಿಯ ಮುಖಂಡ ಸತೀಶ್ ಕುಮಾರ್ ಶರ್ಮಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತನಗೆ ದ್ರೋಹ ಮಾಡಿದೆ ಮತ್ತು ನ್ಯಾಯಯುತವಾಗಿ ವರ್ತಿಸಿಲ್ಲ ಎಂದು ಆರೋಪಿಸಿದ್ದಾರೆ.
ಮಾತ್ರವಲ್ಲ ಪ್ರಾಮಾಣಿಕ ಮತ್ತು ಸಮರ್ಪಿತವಾಗಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೆ ಬಿಜೆಪಿ ದ್ರೋಹ ಬಗೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಥುರಾದಲ್ಲಿ ಪಕ್ಷದ ನಾಯಕರಾಗಿದ್ದ ಶರ್ಮಾ ಅವರು ಪಕ್ಷಕ್ಕಾಗಿ ಮಾಡಿದ ತ್ಯಾಗವನ್ನು ಸ್ಮರಿಸಿದರು.
ಬಿಜೆಪಿ ಈಗ ತನ್ನ ಸಿದ್ಧಾಂತವನ್ನು ಅನುಸರಿಸುವುದಿಲ್ಲ. ಪಕ್ಷದಲ್ಲಿ ಲಾಬಿ ಮಾಡುವವರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ. ನಿಷ್ಠಾವಂತ ಮತ್ತು ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ನಾವು ಸಾಮಾಜಿಕ ಸೇವೆಗೈಯ್ಯಲು ಸ್ವಂತ ಹಣ ಮತ್ತು ಸಂಪನ್ಮೂಲಗಳನ್ನು ವ್ಯಯಿಸುತ್ತೇವೆ. ಇದರ ಹೊರತಾಗಿ ಪಕ್ಷ ನಿಷ್ಠಾವಂತರಿಗೆ ಟಿಕೆಟ್ ನಿರಾಕರಿಸುತ್ತಿದೆ. ಈ ನಿಟ್ಟಿನಲ್ಲಿ ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
