19.39 ಲಕ್ಷ ಎಕರೆ ಗೋಮಾಳದ ಮೇಲೆ ಸಂಘ ಪರಿವಾರದ ಕಣ್ಣು; ಮಾನದಂಡಗಳಿದ್ದರೂ ಮತ್ತೊಂದು ನೀತಿ ಬೇಕಿತ್ತೇ?

Prasthutha|

ಕೃಪೆ, ದಿ ಫೈಲ್

- Advertisement -

ಬೆಂಗಳೂರು: ಎರಡು ವರ್ಷ ಪೂರ್ಣಗೊಳಿಸಿರುವ ಬಿಜೆಪಿ ಸರ್ಕಾರದ ಕಣ್ಣು ರಾಜ್ಯದಾದ್ಯಂತ ಲಭ್ಯ ಇರುವ 19.39 ಲಕ್ಷ ಎಕರೆ ವಿಸ್ತೀರ್ಣದ ಗೋಮಾಳದ ಮೇಲೆ ಬಿದ್ದಿದೆ. ಸಂಘ ಪರಿವಾರದ ಕಾರ್ಯಸೂಚಿಯಂತೆ ಈಗಾಗಲೇ ಮತಾಂತರ ನಿಷೇಧ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ಬೆನ್ನಲ್ಲೇ ಖಾಸಗಿ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡುವ ಉದ್ದೇಶದ ನೆಪದಲ್ಲಿ ಸಂಘ ಪರಿವಾರದ ಹಿನ್ನೆಲೆಯ ಶೈಕ್ಷಣಿಕ ಸಂಸ್ಥೆಗಳಿಗೆ ಗೋಮಾಳ ಮಂಜೂರು ಮಾಡಲು ಪ್ರತ್ಯೇಕ ನೀತಿ ರೂಪಿಸಲು ಹೊರಟಿದೆ!

ಗೋಮಾಳ ಮತ್ತು ಸರ್ಕಾರಿ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ನಿಯಮ, ಕರ್ನಾಟಕ ಭೂ ಮಂಜೂರಾತಿ ನಿಯಮ ಸೇರಿದಂತೆ ಹಲವು ನಿಯಮಗಳು ಜಾರಿಯಲ್ಲಿದ್ದರೂ ಗೋಮಾಳ ಮಂಜೂರಾತಿಗೆ ರಾಜ್ಯ ಬಿಜೆಪಿ ಸರ್ಕಾರವು ಆರ್‌ ಅಶೋಕ್‌ ಆಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯು ಪ್ರತ್ಯೇಕ ನೀತಿ ರೂಪಿಸಲು ಹೊರಟಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

- Advertisement -

ಕಳೆದ ಹತ್ತು ಹಲವು ವರ್ಷಗಳಿಂದಲೂ ಅತಿಕ್ರಮಣಕ್ಕೆ ಒಳಗಾಗಿರುವ ಗೋಮಾಳ ಜಮೀನುಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಸರ್ಕಾರವು ಇದೀಗ 19.39 ಲಕ್ಷ ಎಕರೆ ವಿಸ್ತೀರ್ಣ ಹೊಂದಿರುವ ಗೋಮಾಳ ಮಂಜೂರಾತಿಗೆ ಪ್ರತ್ಯೇಕ ನೀತಿ ರೂಪಿಸಲು ಹೊರಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬಲವಾದ ಆಕ್ಷೇಪಗಳು ವ್ಯಕ್ತವಾಗಿವೆ.

ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1)ರಡಿಯಲ್ಲಿ ಜಾನುವಾರುಗಳಿಗೆ ಮೀಸಲಿರಿಸಬೇಕು. ಆ ನಂತರ ಉಳಿಯುವ ಗೋಮಾಳ ಜಮೀನನ್ನು ನಿಯಮ 97(4)ರಡಿ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಸರ್ಕಾರದ ಉದ್ದೇಶಗಳಿಗೆ ಕಾಯ್ದಿರಿಸಬಹುದು.

ಸ್ಮಶಾನ, ಆಸ್ಪತ್ರೆ, ಸರ್ಕಾರಿ ಶಾಲೆ, ಸರ್ಕಾರಿ ಕಾಲೇಜು, ಸರ್ಕಾರಿ ಕಚೇರಿಗಳಿಗೆ ಕಟ್ಟಡ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಗೋಮಾಳ ಜಮೀನನ್ನು ಮಂಜೂರು ಮಾಡಲು ಅವಕಾಶವಿದೆ. ಆದರೆ ಕಳೆದ ಹಲವು ವರ್ಷಗಳಿಂದಲೂ ಖಾಸಗಿ ಸಂಘ, ಸಂಸ್ಥೆಗಳಿಗೆ ಅನ್ಯ ಉದ್ದೇಶಗಳಿಗೆ ಗೋಮಾಳವನ್ನು ಮಂಜೂರು ಮಾಡುವ ಪರಿಪಾಠ ಈಗಲೂ ಮುಂದುವರೆಯುತ್ತಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಾಗಲೆಲ್ಲ ರಾಷ್ಟ್ರೋತ್ಥಾನ ಪರಿಷತ್‌, ಜನ ಸೇವಾ ವಿಶ್ವಸ್ಥ ಮಂಡಳಿ ಸೇರಿದಂತೆ ಸಂಘ ಪರಿವಾರ ಹಿನ್ನೆಲೆ ಹೊಂದಿರುವ ಸಂಘ ಸಂಸ್ಥೆಗಳಿಗೆ ಗೋಮಾಳ ಜಮೀನು ಮಂಜೂರಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.

ರಾಜ್ಯದಲ್ಲಿ ಲಭ್ಯವಿರುವ ಗೋಮಾಳ ಜಮೀನಿನ ವಿವರ

ಬೆಂಗಳೂರು ನಗರ ಜಿಲ್ಲೆ- 107.19 ಎಕರೆ, ಬೆಂಗಳೂರು ಗ್ರಾಮಾಂತರ; 34,564. 22 ಎಕರೆ, ಬಾಗಲಕೋಟೆ- 6,903.04 ಎಕರೆ, ಬೆಳಗಾವಿ- 68,058-17 ಎಕರೆ, ಬಳ್ಳಾರಿ – 43-39 ಎಕರೆ, ಬೀದರ್‌ – 16,582.15 ಎಕರೆ, ಚಾಮರಾಜನಗರ – 18,992.23 ಎಕರೆ, ಚಿಕ್ಕಬಳ್ಳಾಪುರ – 61,995-20 ಎಕರೆ, ಚಿಕ್ಕಮಗಳೂರು- 1,68,761.18 ಎಕರೆ, ಚಿತ್ರದುರ್ಗ- 4,72,752.20 ಎಕರೆ, ದಕ್ಷಿಣ ಕನ್ನಡ (ಮಂಗಳೂರು)- 6,412 ಎಕರೆ, ದಾವಣಗೆರೆ – 1,36,160.13 ಗುಂಟೆ, ಧಾರವಾಡ – 6,195.29 ಎಕರೆ, ಗದಗ್‌ – 1,704.29 ಎಕರೆ, ಹಾಸನ – 15,323.00 ಎಕರೆ, ಹಾವೇರಿ – 16,488.24.09 ಎಕರೆ, ಕಲಬುರಗಿ- 52,505.20 ಎಕರೆ, ಕೊಡಗು – 1,150.55 ಎಕರೆ, ಕೋಲಾರ – 1,78,338-03.08 ಎಕರೆ, ಕೊಪ್ಪಳ – 21,763.39 ಎಕರೆ, ಮಂಡ್ಯ- 96,652.24 ಎಕರೆ, ಮೈಸೂರು – 1,44,568.26 ಎಕರೆ, ರಾಯಚೂರು – 7,617.00 ಎಕರೆ, ರಾಮನಗರ – 25,387.12 ಎಕರೆ, ಶಿವಮೊಗ್ಗ- 1,58,351 ಎಕರೆ, ತುಮಕೂರು – 1,63,206.18 ಎಕರೆ, ಉತ್ತರ ಕನ್ನಡ (ಕಾರವಾರ) – 1,984.33 ಎಕರೆ, ಉಡುಪಿ- 3,823.52 ಎಕರೆ, ವಿಜಯಪುರ – 15,945.24 ಎಕರೆ, ಯಾದಗಿರಿ – 29,732.15 ಎಕರೆ, ವಿಜಯನಗರ – 7,435.00 ಎಕರೆಯಷ್ಟು ಗೋಮಾಳವಿದೆ.

ಗೋಮಾಳ ಒತ್ತುವರಿ ವಿವರ

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಗೋಮಾಳ ಮತ್ತು ಸರ್ಕಾರಿ ಜಮೀನು ಖಾಸಗಿಯವರಿಂದ ಅತಿಕ್ರಮಣಕ್ಕೂ ಒಳಗಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 14,660 ಪ್ರಕರಣಗಳಲ್ಲಿ 38,888.22 ಎಕರೆ ಅತಿಕ್ರಮಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 38, 546 ಪ್ರಕರಣಗಳಲ್ಲಿ 36, 229 ಎಕರೆ ಒತ್ತುವರಿಯಾಗಿರುವುದು ತಿಳಿದು ಬಂದಿದೆ.

ಬೆಂಗಳೂರು ಉತ್ತರ ತಾಲೂಕಿನಲ್ಲಿ 660 ಪ್ರಕರಣಗಳಲ್ಲಿ 3,054 ಎಕರೆ, , ದಕ್ಷಿಣ ತಾಲೂಕಿನಲ್ಲಿ 6,759 ಪ್ರಕರಣಗಳಲ್ಲಿ 8,084.10 ಎಕರೆ, ಪೂರ್ವ ತಾಲೂಕಿನಲ್ಲಿ 4,762 ಪ್ರಕರಣಗಳಲ್ಲಿ 4,455 .19 ಎಕರೆ, ಯಲಹಂಕ- 1,253 ಪ್ರಕರಣಗಳಲ್ಲಿ 12,741.24 ಎಕರೆ, ಆನೇಕಲ್‌ – 1,226 ಪ್ರಕರಣಗಳಲ್ಲಿ 10,552 .33 ಎಕರೆ ಸೇರಿದಂತೆ ಒಟ್ಟು 14,660 ಪ್ರಕರಣಗಳಲ್ಲಿ 38, 888.22 ಎಕರೆ ಒತ್ತುವರಿಯಾಗಿದೆ.

ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ 2,524 ಪ್ರಕರಣಗಳಲ್ಲಿ 2,649 ಎಕರೆ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 13,328 ಪ್ರಕರಣಗಳಲ್ಲಿ 13,794, ಹೊಸಕೋಟೆ ತಾಲೂಕಿನಲ್ಲಿ 12,758 ಪ್ರಕರಣಗಳಲ್ಲಿ 11,347 ಎಕರೆ, ನೆಲಮಂಗಲ ತಾಲೂಕಿನಲ್ಲಿ 9,936 ಪ್ರಕರಣಗಳಲ್ಲಿ 8,439 ಎಕರೆ ಸೇರಿದಂತೆ ಒಟ್ಟು 38, 546 ಪ್ರಕರಣಗಳಲ್ಲಿ 36, 229 ಎಕರೆ ಅತಿಕ್ರಮಣವಾಗಿರುವುದು ಗೊತ್ತಾಗಿದೆ.

ಹಾಗೆಯೇ ಬೆಂಗಳೂರು ನಗರ ಜಿಲ್ಲೆಯಲ್ಲಿ ಇದುವರೆಗೆ 4,940 ಪ್ರಕರಣಗಳಲ್ಲಿ 16,420 ಎಕರೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 10,892 ಪ್ರಕರಣಗಳಲ್ಲಿ 11,779 ಎಕರೆ ವಿಸ್ತಿರ್ಣದ ಗೋಮಾಳ, ಸರ್ಕಾರಿ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆದಿದೆ.

ಗೋಮಾಳ ಜಮೀನು ಮಂಜೂರಾತಿ ಮಾಡಲು ಅನುಸರಿಸುತ್ತಿರುವ ಮಾನದಂಡಗಳು

ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರು ಭೂ ಮಂಜೂರಾತಿ ಕೋರಿ ನಮೂನೆ 50, ನಮೂನೆ 53 ಮತ್ತು ನಮೂನೆ 57ರಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅರ್ಜಿಗಳನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾದ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣದ ಸಮಿತಿಗಳಲ್ಲಿ ಮಂಡಿಸಿ ಮಂಜೂರಾತಿ ಮಾಡಲು ಹಿಂದಿನಿಂದಲೂ ಇದೇ ಮಾನದಂಡಗಳ ಅಡಿಯಲ್ಲಿಯೇ ಕ್ರಮ ವಹಿಸುತ್ತಿದೆ.

ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 108 ಎಫ್‌ ಅನ್ವಯ ಮಂಜೂರಾತಿ ಮಾಡಲು ಅರ್ಜಿದಾರನ ವಯಸ್ಸು ಕನಿಷ್ಟ 18ವರ್ಷಗಳಾಗಿರಬೇಕು. ಅರ್ಜಿದಾರರು ಭೂ ರಹಿತರಾಗಿದ್ದ ಅರ್ಜಿ ಸಲ್ಲಿಸುವ ದಿನಾಂಕಕ್ಕೆ 3 ವರ್ಷಗಳ ಮುಂಚಿತವಾಗಿ ಮಂಜೂರಾತಿ ಕೋರಿದ ಜಮೀನನ್ನು ನಿರಂತರ ಸಾಗುವಳಿ ಮಾಡುತ್ತಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ ಅಂಥ ಅವಧಿಯು ಒಂದು ವರ್ಷಕ್ಕಿಂತ ಕಡಿಮೆ ಇರಬಾರದು. ಅಲ್ಲದೆ ಅರ್ಜಿದಾರನು ಭೂಮಿಯು ಇರುವ ಅಥವಾ ಪಕ್ಕದಲ್ಲಿರುವ ತಾಲೂಕಿನ ತಾಲೂಕಿನ ಪರಿಮಿತಿಗೊಳಿಗೆ ಖಾಯಂ ನಿವಾಸಿಯಾಗಿರಬೇಕು ಎಂದಿದೆ.

ಹಾಗೆಯೇ ಅರ್ಜಿದಾರರ ಕುಟುಂಬದ ಜಮೀನು ಮತ್ತು ಮಂಜೂರಾತಿ ಕೋರಿರುವ ಜಮೀನು ಸೇರಿ ಒಟ್ಟು 4-38 ಎಕರೆ ಮೀರಿರಬಾರದು/ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಉಪಬಂಧಗಳನ್ವಯ ಅರ್ಜಿದಾರನು ಜಮೀನು ಹೊಂದಿರವುದಕ್ಕೆ ಅರ್ಹನಿರಬೇಕು ಎಂದು ವಿವರಿಸಲಾಗಿದೆಯಲ್ಲದೆ ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1)ರಲ್ಲಿ ನಿಗದಿಪಡಿಸಿರುವಂತೆ ಗೋಮಾಳ ಜಮೀನು ಕೊರತೆ ಇದ್ದಲ್ಲಿಯೂ ಸಹ ನಮೂನೆ-50 ಹಾಗೂ ನಮೂನೆ 53 ಅಡಿ ಬಾಕಿ ಇರುವಂತಹ ಎಲ್ಲಾ ಅರ್ಜಿಗಳನ್ನು ಒಂದು ಬಾರಿ ಸಕ್ರಮಾತಿಗಾಗಿ ನಿಯಮಾನುಸಾರರ ಪರಿಗಣಿಸಬಹುದು ಎಂದು ಹೇಳಲಾಗಿದೆ.

ಆದರೆ ನಿಯಮ 97(1) ರಡಿ ನಿಯಮಿಸಿದ ಕನಿಷ್ಠ ಪ್ರಮಣಕ್ಕಿಂತ ಹೆಚ್ಚಾಗಿದ್ದರೆ ನಮೂನೆ 57ರಲ್ಲಿ ಸ್ವೀಕರಿಸಿರುವ ಅರ್ಜಿಗಳನ್ನು ಸಕ್ರಮಗೊಳಿಸಲುನಿಯಮಾನಸುಆರ ಪರಿಗಣಿಸಬಹುದಾಗಿದೆ. ನಿಯಮ 97(1)ರಡಿ ನಿಯಮಿಸಿದ ವಿಸ್ತೀರ್ಣಕ್ಕಿಂತ ಗೋಮಾಳ ಜಮೀನು ಕೊರತೆ ಇದ್ದಲ್ಲಿ ನಮೂನೆ 57ರಲ್ಲಿ ಸ್ವೀಕರಿಸಿರುವ ಅಜಿfಗಳನ್ನು ಪರಿಗಣಿಸಲು ಅವಕಾಶವಿರುವುದಿಲ್ಲ ಎಂದಿದೆ.

ಗೋಮಾಳ ಮಂಜೂರಾತಿಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಕಾನೂನು, ಅಧಿನಿಯಮಗಳು ಜಾರಿಯಲ್ಲಿರುವಾಗ ಹೊಸತೊಂದು ನೀತಿ ರೂಪಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ, ಸಂಸ್ಥೆಗಳಿಗೆ ಮಂಜೂರು ಮಾಡುವ ಕುರಿತು ನೀತಿ ರೂಪಿಸಲು ಹೊರಟಿರುವುದರ ಹಿಂದೆ ಸಂಘ ಪರಿವಾರದ ಆಶ್ರಯದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಜಮೀನು ಮಂಜೂರು ಮಾಡುವ ಉದ್ದೇಶವಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

Join Whatsapp