ರಾಜಸ್ಥಾನ ಸರಕಾರದ ಮಹತ್ವದ ನಿರ್ಧಾರ | ಮುಖ್ಯಮಂತ್ರಿ, ಸಚಿವರು ಸಹಿತ ಸಿಬ್ಬಂದಿಯ ವೇತನ ಕಡಿತ

Prasthutha|

ಕೊರೋನ ಮಹಾಮಾರಿಯಿಂದಾಗಿ ಸೃಷ್ಟಿಯಾಗಿರುವ ಆರ್ಥಿಕ ಸಂಕಷ್ಟವನ್ನು ಗಮನಿಸುತ್ತಾ ರಾಜಸ್ತಾನ ಸರಕಾರವು ಪ್ರತಿ ತಿಂಗಳು ಮುಖ್ಯಮಂತ್ರಿ, ಶಾಸಕರು, ಅಖಿಲ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳು ಮತ್ತು ರಾಜ್ಯದ ಇತರ ಸಿಬ್ಬಂದಿಯ ವೇತನದ ಒಂದಂಶವನ್ನು ಕಡಿತಗೊಳಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

- Advertisement -

ಬುಧವಾರ ಜೈಪುರದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನವನ್ನು ಮಾಡಲಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರವರ ಅಧ್ಯಕ್ಷತೆಯಲ್ಲಿ ತೆಗೆದುಕೊಳ್ಳಲಾದ ಈ ತೀರ್ಮಾನದ ಪ್ರಕಾರ, ಮುಖ್ಯಮಂತ್ರಿ ಮತ್ತು ಎಲ್ಲಾ ಸಚಿವರ ಪ್ರತಿ ತಿಂಗಳ ಒಟ್ಟು ವೇತನದಿಂದ ತಿಂಗಳಿಗೆ ಏಳು ದಿನಗಳ ವೇತನ, ಎಲ್ಲಾ ಶಾಸಕರುಗಳ ಒಟ್ಟು ವೇತನದಿಂದ ಪ್ರತಿ ತಿಂಗಳು ಒಂದು ದಿನದ ವೇತನ, ಅಖಿಲ ಭಾರತೀಯ ಹಾಗೂ ಆಡಳಿತ ಸೇವೆಗಳ ಅಧಿಕಾರಿಗಳ ಎರಡು ದಿನಗಳ ಮತ್ತು ಅಧೀನ ಸೇವೆ ಮತ್ತು ಇತರ ಆಡಳಿತ ಸಿಬ್ಬಂದಿಗಳ ಒಟ್ಟು ವೇತನದಿಂದ ಒಂದು ದಿನದ ವೇತನವನ್ನು ಪ್ರತಿ ತಿಂಗಳು ಕಡಿತಗೊಳಿಸಿ ಮುಖ್ಯಮಂತ್ರಿಯವರ ನೆರವಿನ ನಿಧಿ(ಕೋವಿಡ್ ನೆರವು)ಗೆ ಜಮೆ ಮಾಡಿಸಲಾಗುವುದು ಎಂದು ಹೇಳಲಾಗಿದೆ.

ಸೆಪ್ಟಂಬರ್ 2020ರಿಂದ ಈ ವೇತನ ಕಡಿತ ಜಾರಿಗೆ ಬರಲಿದ್ದು, ಸರಕಾರವು ಇದರ ಮೊತ್ತವನ್ನು ಕೋವಿಡ್ -19 ಮಹಾಮಾರಿಯಿಂದ ತತ್ತರಿಸಿರುವ ಜನರಿಗೆ ನೆರವು ನೀಡಲು ಬಳಸಿಕೊಳ್ಳಲಿದೆ.

- Advertisement -

ಈ ಕಡಿತದ ನಿಬಂಧನೆಯು ರಾಜಸ್ಥಾನ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರ ಮೇಲೆ ಜಾರಿಗೊಳಿಸಲಾಗುವುದಿಲ್ಲ. ಇದರ ಹೊರತಾಗಿ, ನ್ಯಾಯಾಲಯಗಳ ಅಧಿಕಾರಿಗಳು ಮತ್ತು ಕಾರ್ಮಿಕರು, ವೈದ್ಯಕೀಯ ಮತ್ತು ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ ವಿಭಾಗದ ಎಲ್ಲಾ ಅಧಿಕಾರಿಗಳು, ಪೊಲೀಸ್ ಕಾನ್ಸ ಟೇಬಲ್ ಮತ್ತು ಲೆವೆಲ್ -1ರಿಂದ ಲೆವೆಲ್ -4ರ ವರೆಗಿನ ವೇತನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರಕಾರದ ಎಲ್ಲಾ ಸಿಬ್ಬಂದಿಗೆ ಇದು ಅನ್ವಯಿಸುವುದಿಲ್ಲ ಎಂದು ವರದಿ ಹೇಳಿದೆ.

Join Whatsapp