ರೈಲ್ವೇಯ ಖಾಸಗೀಕರಣ: ಮೀಸಲಾತಿ ನಿರ್ಮೂಲನೆಗೆ ಮೊದಲ ಹೆಜ್ಜೆ

Prasthutha|

ಗೌತಮ್ ಕೆ.

- Advertisement -

ಜಗತ್ತಿನ ಅತಿದೊಡ್ಡ ರೈಲ್ವೇಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೇಯನ್ನು ಹಂತ ಹಂತವಾಗಿ  ಖಾಸಗೀಕರಣಗೊಳಿಸಲಾಗುತ್ತಿದೆ. ಇದು ವಲಸಿಗರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ?, ಸಾಮಾಜಿಕ ನ್ಯಾಯವನ್ನು ಹೇಗೆ ನಿರಾಕರಿಸುತ್ತಿದೆ?, ಹಿಂದುಳಿದ ಮತ್ತು ಮೂಲೆಗೆ ತಳ್ಳಲ್ಪಟ್ಟಂತಹ ವರ್ಗದ ಕೊಡುಗೆಯನ್ನು ಕಡಿಮೆಗೊಳಿಸಿ ಅವರನ್ನು ಯಾವ ರೀತಿ ಗುಲಾಮರನ್ನಾಗಿಡಲು ಪ್ರಯತ್ನಿಸುತ್ತಿದೆ ಎಂಬುದರ ಕುರಿತು ಗೌತಮ್ ಕೆ. ಅವರು ಈ ಲೇಖನದಲ್ಲಿ ಚರ್ಚಿಸಿದ್ದಾರೆ.

ಭಾರತೀಯ ರೈಲ್ವೇಯು ಜಗತ್ತಿನ ಅತೀದೊಡ್ಡ ರೈಲ್ವೇಗಳಲ್ಲಿ ಒಂದಾಗಿದೆ. ಇದನ್ನು ಏಷ್ಯಾ ಖಂಡದ ಅತ್ಯಂತ ವಿಸ್ತಾರವಾದ ರೈಲ್ವೇ ನೆಟ್ ವರ್ಕ್ ಎಂಬುದಾಗಿ ಬಣ್ಣಿಸಲಾಗುತ್ತಿದ್ದು, ಇದನ್ನು ಭಾರತೀಯ ರೈಲ್ವೇ ಸಚಿವಾಲಯವು ನೋಡಿಕೊಳ್ಳುತ್ತಿದೆ. ಸಾವಿರಾರು ರೈಲ್ವೇಗಳು ಮತ್ತು ರೈಲ್ವೇ ಸ್ಟೇಷನ್ ಗಳೊಂದಿಗೆ ಇದು ಏಷ್ಯಾದ ವಿಸ್ತಾರವಾದ ಸಾರ್ವಜನಿಕ ವಲಯವಾಗಿದೆ. ರೈಲು ಮತ್ತು ರೈಲ್ವೇ ಸ್ಟೇಷನ್ ಗಳ ಆಚೆಗೆ ಇದು ದೇಶಾದ್ಯಂತ ರೈಲ್ವೇ ಸಂಬಂಧಿ ಉತ್ಪಾದನಾ ಕಂಪೆನಿಗಳನ್ನು ನಿಭಾಯಿಸುವ ಸಂಸ್ಥೆಯಾಗಿದೆ. ಚೆನ್ನೈಯಲ್ಲಿ ಇಂಟಗ್ರೇಟೆಡ್ ಕೋಚ್ ಫ್ಯಾಕ್ಟರಿ (ಐಸಿಎಫ್), ಪಂಜಾಬ್ನ ಕಪುರ್ತಲಾದಲ್ಲಿ ರೈಲು ಕೋಚ್ ಫ್ಯಾಕ್ಟರಿ, ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಮಾಡರ್ನ್ ಕೋಚ್ ಫ್ಯಾಕ್ಟರಿ ರೈಲು ಸಂಬಂಧಿ ಸಾಮಗ್ರಿಗಳನ್ನು ಉತ್ಪಾದಿಸುವುದರಲ್ಲಿ ತೊಡಗಿದೆ.

- Advertisement -

ಪಶ್ಚಿಮ ಬಂಗಾಳದಲ್ಲಿ ಚಿತ್ತ ರಂಜನ್ ಲೊಕೋಮೋಟಿವ್ ವರ್ಕ್ಸ್, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಡೀಸೆಲ್ ಲೊಕೋಮೋಟಿವ್ ವರ್ಕ್ಸ್, ಪಂಜಾಬ್ ನ ಪಟಿಯಾಲದಲ್ಲಿ ಡೀಸೆಲ್ ಮಾಡರ್ನ್ ಸ್ಟೇಷನ್ ವರ್ಕ್ ಇವುಗಳು ಮೂರು ಲೊಕೋಮೋಟಿವ್(ರೈಲ್ವೇ ಇಂಜಿನ್ ಉತ್ಪಾದನೆ) ಸಂಸ್ಥೆಗಳಾಗಿವೆ. ಇದರೊಂದಿಗೆ ಬೆಂಗಳೂರಿನಲ್ಲಿರುವ ‘ರೈಲ್ ವೀಲ್ ಫ್ಯಾಕ್ಟರಿ’ ಎಂದು ಕರೆಯಲ್ಪಡುವ ಸಂಸ್ಥೆಯು ರೈಲುಗಳ ಚಕ್ರಗಳನ್ನು ಉತ್ಪಾದಿಸುತ್ತಿದೆ. ಭಾರತೀಯ ರೈಲ್ವೇ ಸಚಿವಾಲಯವು ಇವೆಲ್ಲವನ್ನು ನಿಭಾಯಿಸುತ್ತಿದೆ.

ಲಾಲು ಪ್ರಸಾದ್ ಯಾದವ್ ಕಾಲದಲ್ಲಿ ರೈಲ್ವೇ ವಲಯ:

 ಲಾಲು ಪ್ರಸಾದ್ ಯಾದವ್ ಭಾರತದ ಒಬ್ಬ ರಾಜಕಾರಣಿ ಮತ್ತು ಸಾಮಾಜಿಕ ನ್ಯಾಯ ಕಾರ್ಯಕರ್ತರಾಗಿದ್ದು, 2004ರಲ್ಲಿ ಇವರು ರೈಲ್ವೇ ಸಚಿವರಾಗಿ ಆಯ್ಕೆಯಾಗಿದ್ದರು. ಬೃಹತ್ ನಷ್ಟದಲ್ಲಿ ಮುಂದುವರಿಯುತ್ತಿದ್ದ ರೈಲ್ವೇಯನ್ನು ಅವರು ಲಾಭದಾಯಕ ಸಂಸ್ಥೆಯಾಗಿ ಪರಿವರ್ತಿಸಿದ್ದರು. ಹೊಸ ಮಾರ್ಗಗಳನ್ನು ಸೃಷ್ಟಿಸಿ ಅವರು 10 ರೂಪಾಯಿಯಿಂದ 7 ರೂಪಾಯಿ ವರೆಗೆ ದರವನ್ನು ಕಡಿತಗೊಳಿಸಿದ್ದರು. ಭಾರತದ ಇತಿಹಾಸದಲ್ಲೇ ಅದು ಅಭೂತಪೂರ್ವವಾಗಿತ್ತು. ಪ್ರಭಾವಿ ಹಿಂದುತ್ವ ಶಕ್ತಿಯು ಅವರನ್ನು ಒಬ್ಬ ಜೋಕರನ್ನಾಗಿ ಮಾಡಿತು. ಆದರೆ ಇಂದು ರೈಲ್ವೇ ನಷ್ಟದಲ್ಲಿದ್ದು, ಅದನ್ನು ನಡೆಸುವುದು ಅಸಾಧ್ಯ ಎನ್ನುತ್ತಾ ಖಾಸಗಿ ವಲಯಕ್ಕೆ ರೈಲ್ವೇಯನ್ನು ಮಾರುವ ಮೂಲಕ ಇವರು ತಮಾಷೆಯನ್ನು ಸೃಷ್ಟಿಸುತ್ತಿದ್ದಾರೆ.

ಖಾಸಗಿ ಕೈಗಳಲ್ಲಿ ರೈಲ್ವೇ ಸಂಸ್ಥೆಯ ಶೇರ್ ಗಳು:

 ಆರಂಭದಲ್ಲಿ ರೈಲ್ವೇ ಸಚಿವಾಲಯದ ಹಣಕಾಸಿನ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿತ್ತು ಮತ್ತು ಅನುಷ್ಠಾನಗೊಳಿಸಲಾಗುತ್ತಿತ್ತು. ಇದನ್ನು ಸಾಮಾನ್ಯ ಹಣಕಾಸಿನ ಪಟ್ಟಿಯೊಂದಿಗೆ ಸಂಯೋಜಿಸುವುದರೊಂದಿಗೆ ಸರಕಾರವು ಬದಲಾವಣೆಗಳನ್ನು ಆರಂಭಿಸಿತ್ತು. ನಂತರ ದಿಲ್ಲಿ, ಲಕ್ನೋ, ಮುಂಬೈ ಮತ್ತು ಅಹ್ಮದಾಬಾದ್ ರಸ್ತೆಗಳನ್ನು ಖಾಸಗೀ ವಲಯಕ್ಕೆ ಪರೀಕ್ಷಾರ್ಥವಾಗಿ ಮಾರಾಟ ಮಾಡಲಾಗಿತ್ತು. ದಿಲ್ಲಿ, ಲಕ್ನೋ ರೈಲು ಮಾರ್ಗದಲ್ಲಿ ಖಾಸಗಿ ರೈಲು ಸೇವೆಯು ಈಗಷ್ಟೇ ಆರಂಭಗೊಂಡಿದೆ.

 ರೈಲ್ವೇ ಸಚಿವಾಲಯಕ್ಕೆ ಕಳುಹಿಸಲಾದ ಪತ್ರದಲ್ಲಿ ಹಣಕಾಸು ಸಚಿವಾಲಯದ ಚೆಯರ್ಮೆನ್ ಈ ರೀತಿ ಬರೆದಿದ್ದರು, ‘‘ದೇಶಾದ್ಯಂತ ಮೊದಲ ಹಂತದಲ್ಲಿ 50 ರೈಲ್ವೇ ಸ್ಟೇಷನ್ ಗಳು ಖಾಸಗೀಕರಣಗೊಳಿಸಲಾಗುತ್ತದೆ. 150 ರೈಲು ಮಾರ್ಗಗಳನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡಲಾಗುತ್ತದೆ.’’ ಹಣಕಾಸು ಕಮಿಷನ್ ನ ಚೆಯರ್ಮೆನ್ ರ ಪತ್ರವನ್ನು ಪಡೆಯುವುದರೊಂದಿಗೆ ರೈಲ್ವೇ ಸಚಿವಾಲಯವು ಕಣಕ್ಕಿಳಿದು ಈ ಉದ್ದೇಶಕ್ಕಾಗಿ ವಿಶೇಷ ಪ್ರಾಧಿಕಾರವನ್ನು ಸ್ಥಾಪಿಸಿದೆ.

ವಿಮಾನ ನಿಲ್ದಾಣಗಳ ಹಸ್ತಾಂತರದಂತೆ ರೈಲ್ವೇ ಸ್ಟೇಷನ್ ಗಳನ್ನು ಬಹಳ ಕ್ರಮವಾಗಿ ಖಾಸಗಿ ವಲಯಕ್ಕೆ ಹಸ್ತಾಂತರಿಸಲಾಗುತ್ತಿದೆ. ರೈಲ್ವೇಗಳಿಗೆ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಐಆರ್ಸಿಟಿಸಿಯ ಶೇ.12.6ರಷ್ಟು ಶೇರ್ ಗಳನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡಲಾಗಿದೆ. ಇಂಡಿಯನ್ ರೈಲ್ವೇ ಅಕೌಂಟಿಂಗ್ ಕಾರ್ಪೊರೇಷನ್ನ ಶೇ.5ರಷ್ಟು ಶೇರ್ ಗಳನ್ನು ಮತ್ತು ರೈಲ್ವೇ ಸ್ಟೇಷನ್ ಗಳಿಗೆ ಇಂಟರ್ನೆಟ್ ಕನೆಕ್ಷನ್(ವೈಫೈ) ಸೌಲಭ್ಯವನ್ನು ನೀಡುವ ರೈಲ್ಟೆಲ್ನ ಶೇ.10ರಷ್ಟು ಶೇರ್ ಗಳನ್ನು ಖಾಸಗಿ ವಲಯಕ್ಕೆ ಶೀಘ್ರದಲ್ಲೇ ಮಾರಾಟ ಮಾಡಲಾಗುತ್ತಿದೆ.

ಅಪಾಯದಲ್ಲಿ ವಲಸಿಗರ ಜೀವನ:

 ಕೃಷಿಯಿಂದ ಹಿಡಿದು ವ್ಯಾಪಾರದ ವರೆಗೆ ಎಲ್ಲಾ ರೀತಿಯ ವಲಸೆ ಕಾರ್ಮಿಕರ ವಲಸೆಯ ಮೇಲೆ ರೈಲ್ವೇ ಪ್ರಯಾಣವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಚೆನ್ನೈ ಮತ್ತು ಮುಂಬೈಯಂತಹ ದೊಡ್ಡ ನಗರಗಳ ಸುತ್ತಮುತ್ತಲಿನ ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳ ಲಕ್ಷಾಂತರ ಕಾರ್ಮಿಕರು ರೈಲು ಪ್ರಯಾಣವನ್ನು ಅವಲಂಬಿಸಿದ್ದಾರೆ. ಮಾತ್ರವಲ್ಲದೇ, ರೈಲ್ವೇ ಸಂಚಾರವು ನಗರಗಳಿಂದ ಖರೀದಿ ಮತ್ತು ಮಾರಾಟ ಮಾಡುವ ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ಗ್ರಾಮಾಂತರ ಪ್ರದೇಶಗಳಿಂದ ಶಿಕ್ಷಣಕ್ಕಾಗಿ ತೆರಳುವ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಮಂದಿಯ ಅವಿಭಾಜ್ಯ ಅಂಗವಾಗಿದೆ. ಇಂತಹ ವಲಯವೊಂದನ್ನು ಲಾಭದ ಉದ್ದೇಶದೊಂದಿಗೆ ಮಾತ್ರ ಕಾರ್ಯಾಚರಿಸುವ ಖಾಸಗಿ ಕಾರ್ಪೋರೇಟ್ ಗಳಿಗೆ ಹಸ್ತಾಂತರಿಸಿದರೆ ಸಾಮಾನ್ಯ ನಾಗರಿಕರ ಜೀವನವು ದುಸ್ತರವಾಗಲಿದೆ.

 ರೈಲ್ವೇ ವಲಯವನ್ನು ಖರೀದಿಸುವ ಖಾಸಗಿ ಕಂಪೆನಿಗಳು ಮಾಡುವ ಮೊದಲ ಕೆಲಸವೇನೆಂದರೆ, ಮೀಸಲು ಅಲ್ಲದ ಬೋಗಿಗಳನ್ನು ರದ್ದುಗೊಳಿಸುವುದು. ಇದನ್ನು ಕೇಂದ್ರ ಸರಕಾರವು ಈಗಾಗಲೇ ಪ್ರಾರಂಭಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಹೊಸದಾಗಿ ಪ್ರಾರಂಭಿಸಲಾದ ಎಲ್ಲಾ ರೈಲುಗಳಲ್ಲೂ ಮೀಸಲು ಬೋಗಿಗಳಿಲ್ಲ. ಬೋಗಿಗಳನ್ನು ಏಸಿ ಬೋಗಿಗಳನ್ನಾಗಿ ಪರಿವರ್ತಿಸುವ ತನ್ನ ಉದ್ದೇಶವನ್ನು ಮೋದಿ ಸರಕಾರವು ಕ್ರಮವಾಗಿ ಮುಂದೆ ಪೂರೈಸಲಿದೆ. ನಂತರ ಕ್ರಿಯಾಶೀಲ ದರ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ ಮತ್ತು ಪ್ರತಿದಿನವೂ ವಿಮಾನ ದರದಂತೆ ರೈಲು ದರವು ಬದಲಾವಣೆಗೊಳ್ಳುತ್ತಿರುತ್ತದೆ. ಈ ರೀತಿಯಲ್ಲಿ ಗುಣಮಟ್ಟದ ಸೇವೆಯ ಹೆಸರಿನಲ್ಲಿ ದರ ಏರಿಕೆ ನಡೆಯಲಿದೆ. ಅಡುಗೆ ಅನಿಲ ಸಬ್ಸಿಡಿ ಕ್ರಮೇಣ ಕಡಿತಗೊಳಿಸಿದಂತೆ, ಹಿರಿಯರಿಗೆ ಮತ್ತು ವಿಕಲಚೇತನರಿಗೆ ರೈಲು ದರದಲ್ಲಿ ರಿಯಾಯಿತಿಗಳನ್ನು ಕಡಿತಗೊಳಿಸಲಾಗುತ್ತದೆ ಮತ್ತು ಅದನ್ನು ಪರೋಕ್ಷವಾಗಿ ರದ್ದುಗೊಳಿಸಲಾಗುತ್ತದೆ. ಇದರ ಮೊದಲ ಹೆಜ್ಜೆಯಾಗಿ, ಮೋದಿ ಸರಕಾರವು ರೈಲು ದರ ವಿನಾಯಿತಿಗಳನ್ನು ಸ್ವಯಂಪ್ರೇರಣೆಯಿಂದ ಕೈಬಿಡಿ ಅನ್ನುವ ಯೋಜನೆಯನ್ನು ಘೋಷಿಸಿದೆ.

ಸಾಮಾಜಿಕ ನ್ಯಾಯದ ನಾಶ:

 ಸಬಲೀಕರಣದ ವಿರುದ್ಧ ಪ್ರತಿಭಟನೆಗಳು ಎಲ್ಲಾ ಕಡೆಗಳಿಂದಲೂ ಆರಂಭವಾಗಿದೆ. ಈ ಕುರಿತು ಮಾತನಾಡಿರುವ ದ್ರಾವೀಡರ್ ಕಝಗಮ್ ಅಧ್ಯಕ್ಷ ಮತ್ತು ವಿಡುತಲಾಯಿ ಸಂಪಾದಕ ಕೆ.ವೀರಮಣಿ, ‘‘ದೇಶದ ಜನತೆ ಕಡಿಮೆ ದರದಲ್ಲಿ ಪ್ರಯಾಣಿಸುವ ಮತ್ತು ಬಹಳಷ್ಟು ಮಂದಿಗೆ ಸುಲಭವಾಗಿ ದೊರಕುವ ರೈಲ್ವೇಯನ್ನು ಖಾಸಗೀಕರಣಗೊಳಿಸುವುದು ಅಥವಾ ಕಾರ್ಪೊರೇಟ್ ಬಾಸ್ ದೊರೆಗಳಿಗೆ ಒಪ್ಪಿಸುವುದು ಹೊಸದಾದ ಕಲ್ಪನೆ ಅಥವಾ ಯೋಜನೆಯೇನಲ್ಲ. ಸಾರ್ವಜನಿಕ ವಲಯವನ್ನು ಇಲ್ಲವಾಗಿಸುವ ಆರೆಸ್ಸೆಸ್ ನ ನೀತಿಯ ಭಾಗವಾಗಿ ಇದನ್ನು ಮಾಡಲಾಗುತ್ತಿದೆ. ಕ್ರಮವಾಗಿ ಸಮಾನ ಯೋಜನೆ ಮತ್ತು ಸಮಾನವಾದಂತಹ ಆಚರಣೆಗಳನ್ನು ಇಲ್ಲದಂತೆ ಮಾಡುವುದು ಆರೆಸ್ಸೆಸ್ ನ ನೀತಿಯ ಭಾಗವಾಗಿದೆ’’ ಎಂದು ಅವರು ಹೇಳಿದ್ದಾರೆ. ನ್ಯಾಯದ ನೆಲೆಗಟ್ಟಿನಲ್ಲಿ ನೋಡುವುದಾದರೆ ಇದು ತಪ್ಪು.

 ಇಂದು ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯಿಂದಾಗಿ ಪ್ರಭುತ್ವದ ಆಡಳಿತ ವಲಯದಲ್ಲಿ ಎಲ್ಲಾ ಸಾಮಾಜಿಕ ಗುಂಪುಗಳು ಸ್ಥಾನವನ್ನು ಪಡೆದಿವೆ. ವರ್ಣಾಶ್ರಮ ಧರ್ಮದ ಪಾಲನೆಗೆ ಇದು ಅತ್ಯಂತ ದೊಡ್ಡ ತಡೆಯಾಗಿದೆ. ಹೀಗಾಗಿ ಖಾಸಗಿ ವಲಯವು ಹಿಂದುಳಿದ ಮತ್ತು ಮೂಲೆಗೆ ತಳ್ಳಲ್ಪಟ್ಟಂತಹ ವರ್ಗದ ಕೊಡುಗೆಯನ್ನು ಕಡಿಮೆಗೊಳಿಸಿ ಅವರನ್ನು ಗುಲಾಮರನ್ನಾಗಿ ಇಡಲು ಪ್ರಯತ್ನಿಸುತ್ತಿದೆ. ಮತ್ತು ಮೂಲೆಗೆಸೆಯಲ್ಪಟ್ಟವರು ಈ ಷಡ್ಯಂತ್ರವನ್ನು ಅರ್ಥೈಸಿಕೊಂಡು ಇದನ್ನು ವಿಫಲಗೊಳಿಸಲು ಮುಂದೆ ಬರಬೇಕಿದೆ. ಸರಕಾರದ ಮೀಸಲಾತಿ ನೀತಿಯ ಪ್ರಕಾರ, ಸುಮಾರು 19,715, 9,857 ಮತ್ತು 35,485 ಖಾಲಿ ಹುದ್ದೆಗಳನ್ನು ಕ್ರಮವಾಗಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

 ನಿವೃತ್ತಿಗಳ ಕಾರಣದಿಂದ ಖಾಲಿಯಾಗುವ ಸ್ಥಾನಗಳನ್ನು ಭರ್ತಿ ಮಾಡಲು ಸುಮಾರು 99,000 ಸಿಬ್ಬಂದಿಯನ್ನು ನೇಮಕಾತಿ ಮಾಡುವ ಎರಡನೇ ಹಂತದ ಪ್ರಕ್ರಿಯೆಯು ಆರಂಭವಾಗಬೇಕಾಗಿತ್ತು. ಮೀಸಲಾತಿ ನೀತಿಯ ಪ್ರಕಾರ ಸುಮಾರು 15,000, 7500, 27,000 ಮತ್ತು 10,000 ಹುದ್ದೆಗಳು ಕ್ರಮವಾಗಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಇಡಬ್ಲೂಎಸ್ ಅಭ್ಯರ್ಥಿಗಳಿಗೆ ದೊರಕಬೇಕಾಗಿತ್ತು. ಆದರೆ, ರೈಲ್ವೇ ವಲಯವನ್ನು ಕಾರ್ಪೊರೇಟ್ ಗಳು ಶೀಘ್ರವಾಗಿ ವಶಪಡಿಸಿಕೊಂಡಿರುವುದರಿಂದ ಈ ಜಾತಿ ಆಧಾರಿತ ಉದ್ಯೋಗ ಮೀಸಲಾತಿ ವ್ಯವಸ್ಥೆಯು ಅಂತ್ಯಗೊಂಡಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತೀಯ ಜನರಿಗಾಗಿ ಜಾತಿ ಆಧಾರಿತ ಮೀಸಲಾತಿ ಪದ್ಧತಿಯನ್ನು ಜಾರಿಗೆ ತಂದಿದ್ದರು.

 ಈ ಮೀಸಲಾತಿ ಪದ್ಧತಿಯು ಶಿಕ್ಷಣ, ಉದ್ಯೋಗ ಮುಂತಾದವುಗಳಿಗೆ ಸಂಬಂಧಿಸಿದಂತೆ ಹಲವು ಜನರ ಜೀವನಕ್ಕೆ ಬೆಳಕಾಗಿತ್ತು. ರೈಲ್ವೇ ಉದ್ಯೋಗಗಳನ್ನು ಮೆಲ್ಲನೆ ಖಾಸಗಿ ವಲಯಕ್ಕೆ ಹಸ್ತಾಂತರಗೊಳಿಸಲಾಗುತ್ತಿದ್ದು, ಇದು ಪರಿಶಿಷ್ಟ ಮತ್ತು ಹಿಂದುಳಿದ ವರ್ಗಗಳ ನಾಗರಿಕರ ಸಂಪೂರ್ಣ ಬಹಿಷ್ಕಾರಕ್ಕೆ ಕಾರಣವಾಗುತ್ತದೆ. ಮತ್ತು ಉನ್ನತ ಜಾತಿಗಳು ವಿಶೇಷವಾಗಿ ಬ್ರಾಹ್ಮಣ ಸಮುದಾಯವು ಈ ವಲಯದಲ್ಲಿರುವ ಅವಕಾಶಗಳನ್ನು ವಶಪಡಿಸಿಕೊಳ್ಳಲಾಗಿದೆ. ಉನ್ನತ ವರ್ಗದ ಜನರಿಗಾಗಿ ಶೇ.10ರಷ್ಟು ಮೀಸಲಾತಿಯನ್ನು ಮೋದಿ ಸರಕಾರ ಜಾರಿಗೊಳಿಸಿದ್ದು, ಇದು ದೇಶದಲ್ಲಿರುವ ಸಾಮಾಜಿಕ ನ್ಯಾಯದ ಕೂಗಿನ ಬೆಂಕಿಗೆ ಇಂಧನವನ್ನು ತುಂಬಿಸಿದೆ. ಇದು ದಲಿತರು ಮತ್ತು ಒಬಿಸಿಗಳ ಅವಕಾಶಗಳ ಹಾದಿಯನ್ನು ಮುಚ್ಚುತ್ತದೆ ಎಂದು ಇದನ್ನು ಈಗಾಗಲೇ ಹಲವು ನಾಯಕರುಗಳು ಖಂಡಿಸಿದ್ದಾರೆ.

 ಮೋದಿ ಅಧಿಕಾರಕ್ಕೆ ಬಂದಂದಿನಿಂದ ಆರೆಸ್ಸೆಸ್ ನ ಹಿಂದೂ ರಾಷ್ಟ್ರೀಯವಾದಿ ನೀತಿಗಳು ಕಾರ್ಪೋರೇಟ್ ಸಾರ್ವಜನಿಕ ಸಂಸ್ಥೆಗಳನ್ನು ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಒಂದೆಡೆ ನಾಶಗೊಳಿಸುತ್ತಿದೆ. ಇನ್ನೊಂದೆಡೆ, ಇತರ ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಜನಾಂಗೀಯ ವಾದದ ವಿಷವನ್ನು ಹರಡಲಾಗುತ್ತಿದೆ ಮತ್ತು ಇತರ ಸಂಸ್ಕೃತಿಗಳನ್ನು ನಾಶಪಡಿಸಲಾಗುತ್ತಿದೆ. ಇದೀಗ ರೈಲ್ವೇ ಕ್ಷೇತ್ರವು ಇದೇ ಹಾದಿಯಲ್ಲಿರುವುದು ನಿರಾಶಾದಾಯಕವಾಗಿದೆ. ಇತರ ಯಾವುದೇ ಸಾರ್ವಜನಿಕ ವಲಯಗಳಿಗಿಂತಲೂ ರೈಲ್ವೇಯು ಜನರಿಗೆ ನಿಕಟವಾಗಿರುವಂತಹ ಒಂದು ವಲಯವಾಗಿದೆ.

Join Whatsapp