ರೈತರನ್ನು ಅವಮಾನಿಸುವ ಸಚಿವರನ್ನು ಸಂಪುಟದಿಂದ ವಜಾ ಮಾಡಿ: ವಿಜಯೇಂದ್ರ

Prasthutha|

ಬೆಂಗಳೂರು: ರಾಜ್ಯ ಸರ್ಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ರೈತರನ್ನು ಅವಮಾನಿಸುತ್ತಿದ್ದಾರೆ. ಅಂಥಹ ಸಚಿವರಿಗೆ ಸಿಎಂ ಕರೆದು ಬುದ್ಧಿವಾದ ಹೇಳಲಿ. ತಿದ್ದಿಕೊಳ್ಳದ ಸಚಿವರ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

- Advertisement -

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಕುರಿತು ಶಿವಾನಂದ್ ಪಾಟೀಲ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಅವರ ಹೇಳಿಕೆ ಖಂಡನಾರ್ಹ. ಅವರು ರೈತರನ್ನು ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನ್ನ ಕೊಡುವ ರೈತರ ಬಗ್ಗೆ ಸಚಿವರ ಹಾಗೂ ಸರ್ಕಾರದ ಧೋರಣೆ ಆಕ್ಷೇಪಾರ್ಹ ವಿಚಾರವಾಗಿದೆ. ಬರಗಾಲ ಸಂಬಂಧ ರೈತರಿಗೆ ಸಮರ್ಪಕ ಪರಿಹಾರ ನೀಡದ ಸರ್ಕಾರ ಇದಾಗಿದೆ. ಈ ಮೂಲಕ ರೈತರಿಗೆ ಪದೇ ಪದೇ ಅವಮಾನ ಮಾಡುವ ಸರ್ಕಾರ ಇದಾಗಿದ್ದು, ಸಚಿವರ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

Join Whatsapp