ಕೂಡಲೇ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್

Prasthutha|

ಬೀದರ್ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ಮೊದಲನೇ ಕಂತಿನಲ್ಲಿ ಕೂಡಲೇ ಎಕರೆಗೆ 25 ಸಾವಿರ ರೂ. ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ,  ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪುರ್ ಆಗ್ರಹಿಸಿದ್ದಾರೆ.

- Advertisement -

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಹಾನಿ ಸಂಭವಿಸಿದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಳಾರ ಬಿ ಮತ್ತು ಆಣದೂರಿನ ಜಮೀನುಗಳಿಗೆ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ರೈತರು ಬೆಳೆ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಜಮೀನುಗಳಲ್ಲಿ ನೀರು ನಿಂತು ಬೆಳೆ ಹಾನಿ ಸಂಭವಿಸಿದೆ. ಬೆಳೆ ಕಳೆದುಕೊಂಡಿರುವ ರೈತರಿಗೆ ಕೂಡಲೇ ಪರಿಹಾರ ಒದಗಿಸಿಕೊಡುವ ಕೆಲಸವಾಗಬೇಕಾಗಿದೆ ಎಂದರು.

ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಸಾಮಾನ್ಯ ಪ್ರದೇಶದಲ್ಲಿ ಕೂಡ ಬೆಳೆ ಹಾನಿ ಸಂಭವಿಸಿದೆ. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 53 ಸಾವಿರ ಎಕ್ಟರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಮಾಡಿದ ಬಹುತೇಕ ಬೆಳೆ ಸಂಪೂರ್ಣವಾಗಿ ಹಾನಿಗಿಡಾಗಿವೆ. ಬೆಳೆ ಕಳೆದುಕೊಂಡ ರೈತರಿಗೆ ಮೊದಲನೇ ಕಂತಿನಲ್ಲಿ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಒದಗಿಸಿಕೊಡುವ ಕೆಲಸ ಸರ್ಕಾರ ಮಾಡಬೇಕು. ಆ ಮೂಲಕ ರೈತರಿಗೆ ನೆರವಾಗಬೇಕು ಎಂದರು.

- Advertisement -

ಎರಡು ಮೂರು ದಿನಗಳಲ್ಲಿ ವರದಿ ನೀಡಬೇಕು: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಂಭವಿಸಿದ ಬೆಳೆ ಹಾನಿಯ ಸಮೀಕ್ಷೆಯನ್ನು ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿಯಾಗಿ ನಡೆಸಬೇಕು. ಎರಡು ಮೂರು ದಿನಗಳಲ್ಲಿಯೇ ಬೆಳೆ ಹಾನಿಯ ವರದಿಯನ್ನು ನೀಡಬೇಕು ಎಂದು ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸೂಚಿಸಿದರು.

 ಈ ಸಂದರ್ಭದಲ್ಲಿ ಬೀದರ್ ಸಹಾಯಕ ಕೃಷಿ ನಿರ್ದೇಶಕ ದೂಳಪ್ಪ ಹೊಸಳ್ಳಿ, ಕಮಠಾಣಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುನೀಲ್, ಕಂದಾಯ ನಿರೀಕ್ಷಕ ಜೈಭೀಮ್, ಗ್ರಾಮ ಲೆಕ್ಕಾಧಿಕಾರಿ ರೇಣುಕಾ, ಗ್ರಾಮ ಪಂಚಾಯತಿ ಸದಸ್ಯರಾದ ಖಾಶಿನಾಥ್ ಮೇತ್ರೆ, ಶ್ರೀಮಂತ್ ಸಂಗಪ್ಪ, ಗೌತಮ್, ರೈತರಾದ ಸಿದ್ದರಾಮಪ್ಪ ಕೊಂಗನಕೋಟೆ, ಮಹೇಶ ನಾಗಣ್ಣ, ಮಲ್ಲಿಕಾರ್ಜುನ ಚಂದನಕೇರಿ, ಬಸಪ್ಪ ಕುಂಬಾರವಾಡ, ಮಾರುತಿ ಮೇತ್ರೆ, ಸಂತೋಷ ಬಚ್ಚಾ, ಪ್ರಭಾಸ್ ಹದಿನಾಳೆ, ರೇವಣಪ್ಪ ಕಂದಗಾವ್, ಗಾಳೆಪ್ಪಗೌಡ, ಶರಣಪ್ಪ ಈರಪ್ಪ, ಗಾಳೇಪ್ಪ ಹನುಮಂತಪ್ಪ, ಶಿವಶಂಕರ, ರೇವಣಪ್ಪ, ಅಶೋಕ ಸೇರಿದಂತೆ ಅನೇಕರಿದ್ದರು.

Join Whatsapp