ಬಿಜೆಪಿಗೆ ಸ್ಥಿರ ನಾಯಕತ್ವ, ಆಡಳಿತ ನೀಡಲಾಗದಿದ್ದರೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದೇಕೆ?: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ನಿಮಗೆ ಸ್ಥಿರ ನಾಯಕತ್ವ, ಸರ್ಕಾರ ಹಾಗೂ ಆಡಳಿತ ನೀಡಲಾಗದಿದ್ದರೆ ಅದಕ್ಕೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದೇಕೆ? ಬಿಜೆಪಿಯವರು ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗಣವನ್ನು ನೋಡಿಕೊಳ್ಳಲಿ’ ಎಂದು  ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಆರಂಭಿಸಿದ್ದೇ ಬಿಜೆಪಿಯವರು. ನಾವು ಚುನಾವಣೆ 6-8 ತಿಂಗಳು ಇರುವಾಗ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದ್ದೇವೆ. ಆ ರೀತಿ ಆಗುವುದಿದ್ದರೆ ಆ.15ರ ಒಳಗೆ ಆಗಲಿದೆ ಎಂದು ಎಂದು ಬಿಜೆಪಿಯ ಸುರೇಶ್ ಗೌಡರು ಸ್ಪಷ್ಟವಾಗಿ ತಿಳಿಸಿದ್ದಾರೆ. ಇನ್ನು ಯತ್ನಾಳ್ ಅವರು 2500 ಕೋಟಿ ಕೊಟ್ಟರೆ ಸಿಎಂ ಆಗಬಹುದು ಎಂದು ಹೇಳಿದ್ದಾರೆ. ಇಲ್ಲಿ ಅಸಮಾಧಾನದ ಹೊಗೆ ಇರುವುದು ಬಿಜೆಪಿ ಕಾರ್ಯಕರ್ತರಲ್ಲಿ. ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದು ಬಿಜೆಪಿ ಕಾರ್ಯಕರ್ತರಿಂದ ಕೂಗು ಎದ್ದಿದೆಯೇ ಹೊರತು ಕಾಂಗ್ರೆಸ್ ಕಾರ್ಯಕರ್ತರಿಂದ ಅಲ್ಲ. ಬಿಜೆಪಿಯವರು ಕಾಂಗ್ರೆಸ್ ನವರಿಗೆ ಬುದ್ಧಿ ಹೇಳುವ ಬದಲು ತಮ್ಮ ಪಕ್ಷದವರಿಗೆ ಹೇಳಿದರೆ ಉತ್ತಮ. ಪದೇ ಪದೆ ಸಿಎಂ ಬದಲಾವಣೆ ಕೂಗು ಕೇಳಿಬರುತ್ತಿದೆ. ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಗಳು ಅತಿವೃಷ್ಟಿ ಪ್ರದೇಶಗಳಿಗೆ ಹೋಗಿ ವರದಿ ತೆಗೆದುಕೊಂಡು ಬನ್ನಿ ಎಂದು ಪದೇ ಪದೆ ಹೇಳುತ್ತಿದ್ದರೂ ಯಾವ ಮಂತ್ರಿಯೂ ಜಿಲ್ಲೆಗೆ ಹೋಗಿಲ್ಲ. ಮುಖ್ಯಮಂತ್ರಿಗಳೇ ಹೋಗಿ ಜಿಲ್ಲಾ ಮಂತ್ರಿಗಳಿಗೆ ವರದಿ ನೀಡುವ ಇತಿಹಾಸ ನಿರ್ಮಿಸಿದ್ದಾರೆ. ಹೀಗಾಗಿ ಈಶ್ವರಪ್ಪನವರು ತಮ್ಮ ಮನೆಯಲ್ಲಿ ಯಾರು ಅಪಸ್ವರ ಎತ್ತುತ್ತಿದ್ದಾರೋ ಅವರಿಗೆ ಬುದ್ಧಿಮಾತು ಹೇಳಲಿ. ಅವರು ರಾಜೀನಾಮೆ ನೀಡುವಾಗ ಯಾರೂ ಕೂಡ ನಿಮ್ಮ ಸಹಾಯಕ್ಕೆ ಬಂದಿಲ್ಲ ಎಂಬುದನ್ನು ನೆನಪಿನಲ್ಲಿರಲಿ ಎಂದು ತಿಳಿಸಿದರು.

- Advertisement -

ಟ್ವೀಟ್ ಬಗ್ಗೆ ಪಕ್ಷದಲ್ಲಿ ಗೊಂದಲ ಇದೆಯೇ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಮ್ಮ ಟ್ವೀಟ್ ಗಳು ರಾಜಕೀಯ ಆಗು ಹೋಗುಗಳ ಬಗ್ಗೆ ಇರುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿ, ಯುವಕರು, ರೈತರ ಸ್ಥಿತಿ ತಿಳಿಸುವ ಪ್ರಯತ್ನ ಮಾಡುತ್ತೇವೆ. ಇದರಲ್ಲಿ ನಮ್ಮ ಗೊಂದಲ ಹೇಗಾಗುತ್ತದೆ. ಬಿಜೆಪಿಯಲ್ಲಿ ಸಿಎಂ ಬದಲಾವಣೆಯಾದರೆ ಕಾಂಗ್ರೆಸ್ ನಲ್ಲಿ ಪರಿಣಾಮ ಏಕೆ ಬೀರುತ್ತದೆ? ನಾವು ಸಿಎಂ ಬದಲಾವಣೆ ಮಾಡಿದ್ದಾರೆ ಎಂದು ಹೇಳುತ್ತಾರೆ. 1999ರಿಂದ ಯಾರು ಎಷ್ಟು ಸ್ಥಿರ ಆಡಳಿತ ನೀಡಿದ್ದಾರೆ ಎಂದು ಗಮನಿಸಿ ಎಂದು ಪ್ರಿಯಾಂಕ್ ಹೇಳಿದರು.

 ಎಸ್.ಎಂ ಕೃಷ್ಣ ಅವರು ಬಹುತೇಕ 5 ವರ್ಷ ಪೂರ್ಣಗೊಳಿಸಿದರು. ಧರ್ಮಸಿಂಗ್ ಅವರು ಒಂದೂವರೆ ವರ್ಷ ಇದ್ದರು. ಆ ಮೈತ್ರಿ ಸರ್ಕಾರ ಬೀಳದಿದ್ದರೆ ಅವರೇ ಮುಂದುವರಿಯುತ್ತಿದ್ದರು. ನಂತರ ಸಿದ್ದರಾಮಯ್ಯ ಅವರು 5 ವರ್ಷ ಪೂರ್ಣಗೊಳಿಸಿದ್ದಾರೆ. ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಸ್ಥಿರವಾಗಿತ್ತು. ಇವರೇ ಆಪರೇಷನ್ ಕಮಲ ಮಾಡಿ ಅಸ್ಥಿರಗೊಳಿಸಿದರು. ಇವರು ಅಧಿಕಾರಕ್ಕೆ ಬಂದಾಗೆಲ್ಲ 3 ಸಿಎಂ ಆಗಿದ್ದಾರೆ. ಇದರಲ್ಲಿ ಕಾಂಗ್ರೆಸ್ ತಪ್ಪೇನು? ಸದಾನಂದಗೌಡರು, ಜಗದೀಶ್ ಶೆಟ್ಟರ್, ಯಡಿಯೂರಪ್ಪ ಅವರಾಗಿದ್ದರು. ಈಗ ಯಡಿಯೂರಪ್ಪರವರಾಗಿ, ಬೊಮ್ಮಾಯಿ ಅವರಾಗಿದ್ದಾರೆ. ಇದಕ್ಕೆ ಹೊಣೆ ಯಾರು? ನಿಮಗೆ ಸ್ಥಿರ ನಾಯಕತ್ವ, ಸರ್ಕಾರ ಹಾಗೂ ಆಡಳಿತ ನೀಡಲಾಗದಿದ್ದರೆ ಅದಕ್ಕೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದೇಕೆ? ಬಿಜೆಪಿಯವರು ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗಣವನ್ನು ನೋಡಿಕೊಳ್ಳಲಿ’ ಎಂದು ತಿರುಗೇಟು ಕೊಟ್ಟರು.

Join Whatsapp