ಮೂರು ದಿನಗಳ ದಾಳಿಯಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದು 2 ಸಾವಿರ ರೂಪಾಯಿ !

Prasthutha|

ನವದೆಹಲಿ: ಐಟಿ ಅಧಿಕಾರಿಗಳು ಶ್ರೀಮಂತ ಉದ್ಯಮಿಗಳು, ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಲೆಕ್ಕವಿಲ್ಲದ ನಗದು, ದಾಖಲೆಗಳು ಪತ್ತೆಯಾಗುವುದು ಸಾಮಾನ್ಯ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಉದ್ಯಮಿಯೋರ್ವರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ಮೂರು ದಿನಗಳ ಕಾಲ ಪರಿಶೋಧನೆ ನಡೆಸಿದ್ದ ಐಟಿ ಅಧಿಕಾರಿಗಳಿಗೆ ಕೇವಲ 2000 ರೂಪಾಯಿ ದೊರೆತಿರುವ ಅಪರೂಪದ ಪ್ರಕರಣ ವರದಿಯಾಗಿದೆ.
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್’ಅಪ್’ಗಳಲ್ಲಿ ಒಂದಾದ ಇನ್ಫಾ.ಮಾರ್ಕೆಟ್’ನ ಸಂಸ್ಥಾಪಕರಾದ ಸೌವಿಕ್ ಸೆಂಗುಪ್ತ ಮತ್ತು ಆದಿತ್ಯಾ ಶಾರಾದಾ ಅವರ ಮನೆಗಳ ಮೇಲೆ ಮಾರ್ಚ್ 9ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇನ್ಫಾ.ಮಾರ್ಕೆಟ್’ನ ಥಾಣೆ, ಬೆಂಗಳೂರು, ಹೈದರಾಬಾದ್ ಹಾಗೂ ನೋಯ್ಡಾದರಲ್ಲಿರುವ ಕಚೇರಿಗಳ ಮೇಲೆಯೂ ಏಕಕಾಲದಲ್ಲಿ ದಾಳಿ ನಡೆದಿತ್ತು. ಮಾರ್ಚ್ 9ರಂದು ಆರಂಭವಾದ ಪರಿಶೋಧನೆ ಮಾರ್ಚ್ 12ರ ವರೆಗೆ ಮುಂದುವರಿದಿತ್ತು. 72 ಗಂಟೆಗಳ ಕಾಲ ನಡೆದ ದಾಳಿ ಪ್ರಕ್ರಿಯೆಯಲ್ಲಿ ಸೇನ್‌’ಗುಪ್ತಾ ಅವರ ನಿವಾಸದಲ್ಲಿ ಕೇವಲ 2000 ರೂಪಾಯಿ ನಗದು ಮತ್ತು 1.2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದೆ. ಶಾರದಾ ಅವರ ಮನೆಯಲ್ಲಿ ತಲಾ 20 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳು ಪತ್ತೆಯಾಗಿವೆ. ಆದರೆ ವಶಪಡಿಸಿಕೊಳ್ಳಲಾಗಿರುವ 19 ಲಕ್ಷ ರೂಪಾಯಿ ನಗದು ತಮ್ಮ ಕುಟುಂಬ ಸದಸ್ಯರಿಗೆ ಸೇರಿದ್ದಾಗಿದ್ದು ಅದನ್ನು ಮರಳಿ ಪಡೆಯಲು ಅರ್ಜಿ ಸಲ್ಲಿಸುವುದಾಗಿ ಶಾರದಾ ಪ್ರತಿಕ್ರಿಯಿಸಿದ್ದಾರೆ.

- Advertisement -

ಮೂಲಗಳ ಪ್ರಕಾರ ಲೆಕ್ಕಕ್ಕೆ ಸಿಗದ ಯಾವುದೇ ನಗದು – ಆಸ್ತಿಗಳನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎಂದು ‘ಮನಿ ಕಂಟ್ರೋಲ್’ವರದಿ ಮಾಡಿದೆ.

Join Whatsapp