ಡ್ರೋನ್ ಮೂಲಕ ವಕ್ಫ್ ಆಸ್ತಿಗಳ ಸರ್ವೆಗೆ 2.5 ಕೋಟಿ ರೂ.ಅನುದಾನ ಬಿಡುಗಡೆ: ವಕ್ಫ್ ಬೋರ್ಡ್ ಅಧ್ಯಕ್ಷ

Prasthutha|

ಬೆಂಗಳೂರು: ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳನ್ನು ಡ್ರೋನ್ ಮೂಲಕ ಸಮೀಕ್ಷೆ ಮಾಡಲು, ಆಸ್ತಿಗಳ ನಕ್ಷೆಯನ್ನು ಸಿದ್ಧಪಡಿಸಿ ಸಂರಕ್ಷಿಸಲು ಸರ್ಕಾರದ ವತಿಯಿಂದ 2.5 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದ್ದಾರೆ.

- Advertisement -


ಶೀಘ್ರದಲ್ಲೆ ರಾಜ್ಯದಲ್ಲಿ ಡ್ರೋನ್ ಮೂಲಕ ವಕ್ಫ್ ಆಸ್ತಿಗಳ ಸರ್ವೆ ಕಾರ್ಯ ಆರಂಭಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23ನೆ ಸಾಲಿನ ಬಜೆಟ್ ಭಾಷಣದಲ್ಲಿ ವಕ್ಫ್ ಆಸ್ತಿಗಳನ್ನು ಡ್ರೋನ್ ಮೂಲಕ ಸರ್ವೆ ಮಾಡಿಸುವುದಾಗಿ ಘೋಷಿಸಿದ್ದರು. ಅಲ್ಲದೆ, ಇದ್ಕಕಾಗಿ ಅನುದಾನವನ್ನು ಮೀಸಲಿರಿಸಿದ್ದರು ಎಂದರು.


ಅದರಂತೆ, ರಾಜ್ಯ ಸರ್ಕಾರವು ವಕ್ಫ್ ಬೋರ್ಡ್ ಗೆ ಸರ್ವೆ ಕಾರ್ಯಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಿದೆ. ಆದಷ್ಟು ಶೀಘ್ರವೇ ರಾಜ್ಯದ ವಕ್ಫ್ ಅಧಿಕಾರಿಗಳು ಹಾಗೂ ವಕ್ಫ್ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರೊಂದಿಗೆ ಸಮಾಲೋಚನೆ ನಡೆಸಿ, ವಕ್ಫ್ ಆಸ್ತಿಗಳ ಸರ್ವೆ ಕಾರ್ಯ ಯಾವ ರೀತಿ ನಡೆಸಬೇಕೆಂಬುದರ ಕುರಿತು ಚರ್ಚೆ ನಡೆಸಲಾಗುವುದು ಎಂದು ಶಾಫಿ ಸಅದಿ ಹೇಳಿದರು.
ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಮೊದಲ ಹಂತದ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಎರಡನೆ ಹಂತದ ಸರ್ವೆ ಕಾರ್ಯವು ಮುಕ್ತಾಯದ ಹಂತದಲ್ಲಿದೆ. ಜೊತೆಗೆ ಆಸ್ತಿಗಳ ನಕ್ಷೆಗಳ ಸಂರಕ್ಷಣಾ ಕಾರ್ಯಕ್ಕೂ ಬೋರ್ಡ್ ವತಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ರಾಜ್ಯ ಸರ್ಕಾರದ ವತಿಯಿಂದ ಡ್ರೋನ್ ಸರ್ವೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ವಕ್ಫ್ ಆಸ್ತಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಮತ್ತಷ್ಟು ಶಕ್ತಿ ಸಿಗಲಿದೆ ಎಂದು ಅವರು ತಿಳಿಸಿದರು.

- Advertisement -


ವಕ್ಫ್ ಬೋರ್ಡ್ ನ ಕೇಂದ್ರ ಕಚೇರಿಯ ಕಟ್ಟಡದ ನವೀಕರಣ ಹಾಗೂ ದುರಸ್ತಿಗಾಗಿಯೂ ಸರ್ಕಾರದ ವತಿಯಿಂದ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನದಲ್ಲಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯ ಹೊರಾಂಗಣ ಹಾಗೂ ಒಳಾಂಗಣದ ನವೀಕರಣ ಹಾಗೂ ದುರಸ್ತಿ ಕೆಲಸವನ್ನು ಮಾಡಲಾಗುವುದು ಎಂದು ಶಾಫಿ ಸಅದಿ ಹೇಳಿದರು.

Join Whatsapp