ಮಥಾಯಿ ನೇತೃತ್ವದ ಆಮ್ ಆದ್ಮಿ ಪಾರ್ಟಿ ನಿಯೋಗದಿಂದ ರವೀಂದ್ರನಾಥ್ ಭೇಟಿ

Prasthutha|

ಬೆಂಗಳೂರು: ಅವಧಿಪೂರ್ವ ವರ್ಗಾವಣೆಗಳಿಂದ ನೊಂದು ರಾಜೀನಾಮೆ ನೀಡಿರುವ ಡಿಜಿಪಿ ಡಾ.ಪಿ.ರವೀಂದ್ರನಾಥ್ ರವರನ್ನು ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ ನೇತೃತ್ವದ ಆಮ್ ಆದ್ಮಿ ಪಾರ್ಟಿ ನಿಯೋಗ ಭೇಟಿ ಮಾಡಿ, ಬೆಂಬಲ ಸೂಚಿಸಿತು.

- Advertisement -


ಬೆಂಗಳೂರಿನ ಸಿಐಡಿ ಕೇಂದ್ರ ಕಚೇರಿ ರವೀಂದ್ರನಾಥ್ ರವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಹಿರಿಯ ಮುಖಂಡ ಕೆ.ಮಥಾಯಿ, “ಬಿಜೆಪಿ ಶಾಸಕ ರೇಣುಕಾಚಾರ್ಯ ಪುತ್ರಿ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವುದಕ್ಕೆ ಸಂಬಂಧಿಸಿ ರವೀಂದ್ರನಾಥ್ ನೋಟಿಸ್ ಜಾರಿ ಮಾಡಿದ್ದರು. ನಕಲಿ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ವಿರುದ್ಧವೂ ರವೀಂದ್ರನಾಥ್ ಕ್ರಮಕ್ಕೆ ಮುಂದಾಗಿದ್ದರು. ರಾಜ್ಯ ಬಿಜೆಪಿ ಸರ್ಕಾರವು ಭ್ರಷ್ಟರನ್ನು ರಕ್ಷಿಸಲು ರವೀಂದ್ರನಾಥ್ ರವರಿಗೆ ಅವಧಿಪೂರ್ವ ವರ್ಗಾವಣೆ ಶಿಕ್ಷೆ ನೀಡಿದೆ” ಎಂದು ಆರೋಪಿಸಿದರು.


“ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ರವೀಂದ್ರನಾಥ್ ರವರ ರಾಜೀನಾಮೆಯನ್ನು ಅಂಗೀಕಾರ ಮಾಡಬಾರದು. ಸರ್ಕಾರದ ಉನ್ನತ ಪ್ರತಿನಿಧಿಗಳು ರವೀಂದ್ರನಾಥ್ ರವರನ್ನು ಭೇಟಿಯಾಗಿ, ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಬೇಕು. ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಅವರು ತಮ್ಮ ಹುದ್ದೆಯಲ್ಲಿ ಮುಂದುವರಿದು, ನಕಲಿ ಪ್ರಮಾಣಪತ್ರ ಪಡೆದ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಲು ಅವಕಾಶ ಕಲ್ಪಿಸಬೇಕು” ಎಂದು ಕೆ.ಮಥಾಯಿ ಆಗ್ರಹಿಸಿದರು.

- Advertisement -


“ಬಿಜೆಪಿ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಭ್ರಷ್ಟರನ್ನು ರಕ್ಷಿಸಲು ತುದಿಗಾಲಲ್ಲಿ ನಿಂತಿರುತ್ತದೆ. ಇದಕ್ಕಾಗಿ ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ನೀಡುತ್ತಾ ಬಂದಿವೆ. ನನ್ನನ್ನು ಕೂಡ 18 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 28 ಬಾರಿ ವರ್ಗಾವಣೆ ಮಾಡಲಾಗಿತ್ತು. ಪ್ರಾಮಾಣಿಕ ಅಧಿಕಾರಿಗಳಿಗೆ ಆಮ್ ಆದ್ಮಿ ಪಾರ್ಟಿಯೊಂದೇ ಸದಾ ಬೆಂಬಲ ನೀಡುತ್ತಿದ್ದು, ರವೀಂದ್ರನಾಥ್‌ರವರಿಗೂ ಪಕ್ಷದ ಸಂಪೂರ್ಣ ಬೆಂಬಲವಿದೆ” ಎಂದು ಕೆ.ಮಥಾಯಿ ಹೇಳಿದರು.

ಇದೇ ಸಮಯದಲ್ಲಿ ಪಕ್ಷದ ನಾಯಕರುಗಳನ್ನು ಸಿಐಡಿ ಕಚೇರಿಗೆ ಬಿಡದೆ ದುರ್ವರ್ತನೆ ತೋರಿದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಪುಟ್ಟಸ್ವಾಮಿ ಯ ವಿರುದ್ಧ ಎಡಿಜಿಪಿ ರವೀಂದ್ರನಾಥ್ ಸ್ಥಳದಲ್ಲಿಯೇ ಅಮಾನತುಗೊಳಿಸಬೇಕೆಂದು ಡಿ ಜಿ ಪಿ ಮತ್ತು ಐ ಜಿ ಪಿ ಪ್ರವೀಣ್ ಸೂದ್ ರಿಗೆ ಫೋನಾಯಿಸಿದರು. ನಂತರ ಕಾಲ್ನಡಿಗೆಯಲ್ಲಿಯೇ ನೃಪತುಂಗ ಕಚೇರಿಯ ಡಿಜಿಪಿ ಕಚೇರಿಗೆ ಹೋಗಿ ದುರ್ವರ್ತನೆ ತೋರಿದ ಇನ್ಸ್ ಪೆಕ್ಟರ್ ವಿರುದ್ಧ ದೂರನ್ನು ದಾಖಲಿಸಿದರು.

ಆಮ್ ಆದ್ಮಿ ಪಾರ್ಟಿಯ ನಿಯೋಗದಲ್ಲಿ ಪಕ್ಷದ ಮುಖಂಡರಾದ , ಉಷಾ ಮೋಹನ್, ಗೋಪಿನಾಥ್, ರಾಜಶೇಖರ್ ದೊಡ್ಡಣ್ಣ ಮತ್ತಿತರರು ಇದ್ದರು.

Join Whatsapp