ದಲಿತ ಕುಟುಂಬಗಳಿಗೆ 10 ಲಕ್ಷ ರೂ. ಹಣಕಾಸು ನೆರವು ನೀಡಲು ತೆಲಂಗಾಣ ಸರಕಾರ ನಿರ್ಧಾರ
Prasthutha: June 28, 2021

ಹೈದರಾಬಾದ್ : ಅರ್ಹ ದಲಿತ ಕುಟುಂಬಗಳಿಗೆ 10 ಲಕ್ಷ ರೂ. ಹಣಕಾಸು ನೆರವು ನೀಡುವ ವಿಶಿಷ್ಟ ಕಾರ್ಯಕ್ರಮವೊಂದನ್ನು ತೆಲಂಗಾಣ ಸರಕಾರ ಘೋಷಿಸಿದೆ. ಮುಖ್ಯಮಂತ್ರಿ ದಲಿತ ಸಬಲೀಕರಣ ಕಾರ್ಯಕ್ರಮ ಯೋಜನೆಯಡಿ ರಾಜ್ಯದ 119 ವಿಧಾನಸಭಾ ಕ್ಷೇತ್ರಗಳಲ್ಲಿ, ಪ್ರತಿತಲಾ 100 ಕುಟುಂಬಗಳಿಗೆ 10 ಲಕ್ಷ ರೂ. ಹಣಕಾಸು ಬೆಂಬಲ ನೀಡುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಗಾಗಿ ಪ್ರಥಮ ಹಂತದಲ್ಲಿ 1,200 ಕೋಟಿ ರೂ. ಬಜೆಟ್ ಕಾದಿರಿಸಲು ಸರಕಾರ ನಿರ್ಧರಿಸಿದೆ. ಈ ಹೊಸ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಅಂತಿಮ ಮಾರ್ಗಸೂಚಿ ರಚಿಸಲು ವಿವಿಧ ದಲಿತ ಪ್ರತಿನಿಧಿಗಳು ಮತ್ತು ಸರ್ವ ಪಕ್ಷಗಳ ಪ್ರತಿನಿಧಿಗಳ ಜೊತೆ ಸಿಎಂ ಕೆ. ಚಂದ್ರಶೇಖರ್ ರಾವ್ ಸತತ 11 ಗಂಟೆಗಳ ಸಭೆ ನಡೆಸಿದ್ದಾರೆ.
ಆಯ್ದ ಅರ್ಹ ದಲಿತ ಕುಟುಂಬದ ಸದಸ್ಯರ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ. ದಲಿತರ ಸಾಮಾಜಿಕ ಮತ್ತು ಆರ್ಥಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹಂತ ಹಂತದ ಯೋಜನೆಗಳನ್ನು ಜಾರಿಗೊಳಿಸಲು ಸರಕಾರ ಸಿದ್ಧವಾಗಿದೆ ಎಂದು ಸಿಎಂ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ಈ ಯೋಜನೆ ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ವಿವಿಧ ಹಂತದಲ್ಲಿ ಜಾರಿಗೊಳ್ಳಲಿದ್ದು, 30,000-40,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
