ಕೊಡಗು: ದಕ್ಷಿಣ ಕೊಡಗಿನಿಂದ ಕೇರಳಕ್ಕೆ ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ವೀರಾಜಪೇಟೆ ಸಿ.ಐ.ಡಿ ಪೊಲೀಸ್ ಮತ್ತು ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ಭೇದಿಸಿದ್ದಾರೆ.
ಕೇರಳ ನೋಂದಣಿಯ ಬೊಲೆರೋ ಮಹೇಂದ್ರ ಪಿಕ್ ಅಪ್ ವಾಹನವು ಈಚೂರು ಗ್ರಾಮದಿಂದ ಕೇರಳಕ್ಕೆ ಬೀಟೆ ಮರದ ದಿಮ್ಮಿಗಳನ್ನು ಅಕ್ರಮವಾಗಿ ತುಂಬಿಸಿಕೊಂಡು ಹೋಗುತ್ತಿರುವುದಾಗಿ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ವೀರಾಜಪೇಟೆ ಸಿ.ಐ.ಡಿ ಪೊಲೀಸ್ ಮತ್ತು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು 6ಲಕ್ಷ ರೂ.ಮೌಲ್ಯದ ಪಿಕ್ ಅಪ್ ವಾಹನ ಮತ್ತು,3.5ಲಕ್ಷ ಮೌಲ್ಯದ 5 ಬೀಟೆ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯ ಎ.ಕೆ.ರಾಜು ಎಂಬಾತನನ್ನು ಬಂಧಿಸಿ ಅರಣ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್ ಚಂದ್ರ ಅವರ ನಿರ್ದೇಶನದ ಮೇರೆಗೆ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಆರಕ್ಷಕ ಉಪನಿರೀಕ್ಷಕ ವೀಣಾನಾಯಕ್, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ.ಬೀನಾ, ಎಸ್.ಎಂ.ಯೋಗೇಶ್, ಪಿ.ಯು ಮುನೀರ್, ಆರ್. ನಂದ ಕುಮಾರ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.