ಪ್ಯಾರಿಸ್: 2021ನೇ ವರ್ಷದ ಅತ್ಯಂತ ಶ್ರೀಮಂತ ಫುಟ್ಬಾಲಿಗನೆಂಬ ಕೀರ್ತಿಗೆ ಕ್ರಿಸ್ಟಿಯಾನೋ ರೊನಾಲ್ಡೋ ಪಾತ್ರಾಗಿದ್ದಾರೆ. ಈ ಹಾದಿಯಲ್ಲಿ ರೊನಾಲ್ಡೊ, ಅರ್ಜೆಂಟೀನಾದ ಸ್ಟಾರ್ ಸ್ಟ್ರೈಕರ್ ಲಿಯೊನೆಲ್ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ.
ಪ್ರಸಕ್ತ ವರ್ಷ ಫುಟ್ಬಾಲ್’ನಲ್ಲಿ ಅತೀ ಹೆಚ್ಚು ಆದಾಯ ಪಡೆದ ಹತ್ತು ಆಟಗಾರರ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆಯು ಪ್ರಕಟಿಸಿದ್ದು, ಇದರಲ್ಲಿ ರೊನಾಲ್ಡೋ ಅಗ್ರಸ್ಥಾನ ಗಳಿಸಿದ್ದಾರೆ. ಇತ್ತೀಚಗಷ್ಟೇ ಪ್ರೀಮಿಯರ್ ಲೀಗ್’ನ ದೈತ್ಯ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಕೂಡಿಕೊಂಡಿರುವ ರೊನಾಲ್ಡೋ, ಒಟ್ಟು 125 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.
ಇದರಲ್ಲಿ 70 ಮಿಲಿಯನ್ ಡಾಲರ್ ಸಂಬಳ ಮತ್ತು ಬೋನಸ್ ರೂಪದಲ್ಲಿ, ಉಳಿದಂತೆ 55 ಮಿಲಿಯನ್ ಡಾಲರ್’ನ್ನು ಜಾಹೀರಾತಿನ ಮೂಲಕ ಗಳಿಸಿದ್ದಾರೆ. ಆ ಮೂಲಕ ಈ ವರ್ಷ ಜಾಹೀರತಿನ ಮೂಲಕ ಅತೀ ಹೆಚ್ಚು ಆದಾಯ ಗಳಿಸಿದವರ ಪಟ್ಟಿಯಲ್ಲಿ ರೊನಾಲ್ಡೊ ನಾಲ್ಕನೆ ಸ್ಥಾನಕ್ಕೇರಿದ್ದಾರೆ. ಟೆನಿಸ್ ತಾರೆ ರೋಜರ್ ಫೆಡರರ್ (90 ಮಿಲಿಯನ್ ಡಾಲರ್), ಲೆಬೋರ್ನ್ ಜೇಮ್ಸ್ (65 ಮಿಲಿಯನ್ ಡಾಲರ್), ಹಾಗೂ ಗಾಲ್ಫ್ ತಾರೆ ಟೈಗರ್ ವುಡ್ಸ್ (60 ಮಿಲಿಯನ್ ಡಾಲರ್) ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.
ಫುಟ್ಬಾಲ್ ನ ಸರ್ವ ಶ್ರೇಷ್ಠ ಆಟಗಾರರಲ್ಲಿ ಓರ್ವರಾದ ಲಿಯೊನೆಲ್ ಮೆಸ್ಸಿ, ಫೋರ್ಬ್ಸ್ ಪ್ರಕಟಿಸಿದ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೆಸ್ಸಿಯ ಈ ವರ್ಷದ ಒಟ್ಟು ಗಳಿಕೆ 110 ಮಿಲಿಯನ್ ಡಾಲರ್. ಇದರಲ್ಲಿ 75 ಮಿಲಿಯನ್ ಡಾಲರ್ ಸಂಬಳ ಮತ್ತು ಬೋನಸ್ ರೂಪದಲ್ಲಿ, ಉಳಿದಂತೆ 35 ಮಿಲಿಯನ್ ಡಾಲರ್’ನ್ನು ಜಾಹೀರಾತಿನ ಮೂಲಕ ಗಳಿಸಿದ್ದಾರೆ. ತನ್ನ ವೃತ್ತಿ ಜೀವನದ ಆರಂಭದಿಂದ ಒಟ್ಟು 21 ವರ್ಷ ಒಂದೇ ಕ್ಲಬ್ ಪರವಾಗಿ ಆಡಿದ್ದ ಮೆಸ್ಸಿ ಜೊತೆಗಿನ ಒಪ್ಪಂದ ನವೀಕರಿಸಲು ಹಣಕಾಸಿನ ನೆಪ ಒಡ್ಡಿ ಬಾರ್ಸಿಲೋನ ಆಡಳಿತ ಮಂಡಳಿ ಹಿಂದೇಟು ಹಾಕಿತ್ತು. ಹೀಗಾಗಿ 34 ವರ್ಷದ ಮೆಸ್ಸಿ ಬಾರ್ಸಿಲೋನ ತೊರೆದು ಪ್ಯಾರಿಸ್ ಸೇಂಟ್ ಜರ್ಮನ್ ಕ್ಲಬ್ ಪರವಾಗಿ ಆಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಅತೀ ಹೆಚ್ಚು ಆದಾಯ ಪಡೆದವರ ಪಟ್ಟಿಯಲ್ಲಿ ಪಿಎಸ್’ಜಿಯ ನೇಮರ್ ಈ ಬಾರಿಯೂ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ನೇಮರ್ ಒಟ್ಟು ಗಳಿಕೆ 95 ಮಿಲಿಯನ್ ಡಾಲರ್. ಉಳಿದಂತೆ ಪಿಎಸ್’ಜಿಯ ಕಿಲಿಯನ್ ಎಂಬಾಪೆ (43 ಮಿಲಿಯನ್ ಡಾಲರ್), ಲಿವರ್’ಪೂಲ್;ನ ಮಹಮ್ಮದ್ ಸಲಾಹ್ (41 ಮಿಲಿಯನ್ ಡಾಲರ್) ನಂತರದ ಸ್ಥಾನದಲ್ಲಿದ್ದಾರೆ.